ಕೊಪ್ಪ ಸಹಕಾರ ಸಾರಿಗೆ ಸಂಸ್ಥೆಗೆ ನೆರವು ಬಿಡುಗಡೆ ವಿನಯ್ ಗುರೂಜಿ ಮುಖ್ಯಮಂತ್ರಿ ಭೇಟಿ

web 1
Published on

ಕೊಪ್ಪ: ಸಹಕಾರ ಸಾರಿಗೆ ಬಸ್ ಸಂಚಾರ ಸ್ಥಗಿತದಿಂದ ಸಮಸ್ಯೆ ಉಲ್ಬಣಗೊಂಡಿದ್ದು ಸರ್ಕಾರದಿಂದ ನೆರವು ಕೊಡಿಸಲು ಹಲವು ರೀತಿಯ ಪ್ರಯತ್ನಗಳು ನಡೆದಿವೆ. ಇದೇ ಉದ್ದೇಶಕ್ಕೆ ಗೌರಿಗದ್ದೆ ಆಶ್ರಮದ ವಿನಯ್ ಗುರೂಜಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲಿದ್ದಾರೆ.

ಸರ್ಕಾರದ ನೆರವು ಬಿಡುಗಡೆಗೆ ಒತ್ತಾಯಿಸಿ ಸಹಕಾರ ಸಾರಿಗೆ ಸಂಸ್ಥೆ ನೌಕರರು ಬಾಳಗಡಿ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದು, ಹಲವು ಮುಖಂಡರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ಪ್ರಯತ್ನ ಮಾಡುವ ಭರವಸೆ ನೀಡುತ್ತಿದ್ದಾರೆ.

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ ವಿನಯ್ ಗುರೂಜಿ, 30 ಶಾಸಕರೊಂದಿಗೆ ಮಾತುಕತೆ ನಡೆಸಿದ್ದು ಪಕ್ಷಾತೀತವಾಗಿ ಸಹಕಾರ ಸಾರಿಗೆಯ ಆರ್ಥಿಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಸರ್ಕಾರ ನೆರವು ನೀಡುವ ವಿಶ್ವಾಸವಿದೆ. ಒಂದು ವೇಳೆ ಸಮಸ್ಯೆ ಬಗೆಹರಿಸದಿದ್ದರೆ ಆಶ್ರಮದ ಭಕ್ತರು ಹಾಗೂ ಸಹಕಾರ ಸಾರಿಗೆ ಸಂಸ್ಥೆ ಕಾರ್ವಿುಕರೊಂದಿಗೆ ಪ್ರತಿಭಟನೆ ಮಾಡಲು ಸಿದ್ಧನಿದ್ದೇನೆ ಎಂದರು.

ಮಲೆನಾಡಿನ ಕುಗ್ರಾಮದಿಂದ ಪಟ್ಟಣ ಪ್ರದೇಶಕ್ಕೆ ಜನರ ಸಂಪರ್ಕವನ್ನು ಬೆಳೆಸಿದ ಸಹಕಾರ ಸಾರಿಗೆ ಬಸ್​ನ ಋಣ ಎಲ್ಲ ಪಕ್ಷ ಹಾಗೂ ಜನತೆ ಮೇಲಿದೆ. ಸಂಸ್ಥೆಯಿಂದ ಸೇವೆ ಪಡೆದುಕೊಂಡುವರು ಸಾರಿಗೆ ನೌಕಕರ ಸಂಕಷ್ಟಕ್ಕೆ ಭಾಗಿಯಾಗಬೇಕು. ಸಾರ್ವಜನಿಕರು ಪಕ್ಷ ಬೇಧ ಮರೆತು ಅವರ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಸಂಸ್ಥೆ ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ನೆರವು ದೊರಕಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು. ಜೆಡಿಎಸ್ ಮುಖಂಡ ಎಚ್.ಜಿ ವೆಂಕಟೇಶ್ ಭೇಟಿ ನೀಡಿ ಪ್ರತಿಭಟನಕಾರರ ಸಮಸ್ಯೆ ಆಲಿಸಿದರು.

ಪ್ರತಿಭಟನೆ ಬುಧವಾರವೂ ಮುಂದುವರಿಯಲಿದ್ದು, ಬಸ್ ಸಂಚಾರ ಸ್ಥಗಿತವಾಗಲಿದೆ. ಬೆಂಗಳೂರಿನ ವಿಕಾಸ ಸೌಧದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸಹಕಾರ ಸಾರಿಗೆ ಸಂಸ್ಥೆ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಧರಣಿ ಸತ್ಯಾಗ್ರಹದಲ್ಲಿ ಸಂಸ್ಥೆ ಅಧ್ಯಕ್ಷ ಈ.ಎಸ್.ಧರ್ಮಪ್ಪ, ಜೆಡಿಎಸ್ ಮುಖಂಡ ಸುರೇಶ್ ಹೊಸೂರ್, ಸಾಹಿತಿ ಎಚ್.ಎಂ.ರವಿಕಾಂತ್, ಕಸಾಪ ಅಧ್ಯಕ್ಷ ಇನೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net