

ಚಿಕ್ಕೋಡಿ/ಮಾಂಜರಿ: ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿ (ಅಂತಾರಾಜ್ಯ)ಗೆ ಕಳೆದ ಆರ್ಥಿಕ ವರ್ಷದಲ್ಲಿ 19.32 ಕೋಟಿ ರೂ. ಲಾಭವಾಗಿದ್ದು, ಸದಸ್ಯರಿಗೆ ಶೇ.15 ಲಾಭಾಂಶ ವಿತರಿಸಲಾಗುವುದು ಎಂದು ಸಂಸ್ಥೆಯ ಆಮಂತ್ರಿತ ನಿರ್ದೇಶಕ ಅಮಿತ ಪ್ರಭಾಕರ ಕೋರೆ ಹೇಳಿದರು.
ತಾಲೂಕಿನ ಅಂಕಲಿಯ ಶಿವಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಹಕಾರಿಯ 36ನೇ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿ, ಸಹಕಾರಿಯು ಅಂತಾರಾಜ್ಯ ಸಹಕಾರಿ ಸಂಸ್ಥೆಯಾಗಿ ಪರಿವರ್ತನೆಗೊಂಡಿದ್ದು, ಮಹಾರಾಷ್ಟ್ರದಲ್ಲಿ 9 ಶಾಖೆ ಪ್ರಾರಂಭಿಸಲಾಗುವುದು ಹಾಗೂ ಬರುವ ದಿನಗಳಲ್ಲಿ ಗೋವಾ ರಾಜ್ಯಕ್ಕೆ ವಿಸ್ತರಿಸಲಾಗಿದೆ ಎಂದರು.
ಡಾ.ಪ್ರಭಾಕರ ಕೋರೆ ಅಂತಾರಾಜ್ಯ ಸಹಕಾರಿ ಸಂಸ್ಥೆಯು ಪ್ರತಿ ವರ್ಷ ತನ್ನ ವಾರ್ಷಿಕ ವಹಿವಾಟಿನಲ್ಲಿ ಶೇ. 30ರಷ್ಟು ಬೆಳವಣಿಗೆಯಾಗುತ್ತಿದೆ. ಸಹಕಾರಿಯು ಕೇವಲ ಸಾಲ ನೀಡಿ, ಠೇವು ಸಂಗ್ರಹಿಸುವುದಕ್ಕೆ ಮೀಸಲಾಗದೇ ಡಿಜಿಟಲೈಜೇಷನ್ ಬ್ಯಾಂಕ್ ಆಗಿ ಪರಿವರ್ತನೆ ಮಾಡಲು ನಿರ್ಧರಿಸಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮಾತನಾಡಿ, ಡಾ.ಪ್ರಭಾಕರ ಕೋರೆ ಅವರ ಮುಂದಾಲೋಚನೆಯಿಂದ ಸಹಕಾರಿಯು ಬೃಹದಾಕಾರವಾಗಿ ಬೆಳೆದು ನಿಂತಿದೆ ಎಂದರು.
ಸಹಕಾರಿಯ ಚೇರ್ಮನ್ ಮಹಾಂತೇಶ ಪಾಟೀಲ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್.ಕರೋಶಿ ವಾರ್ಷಿಕ ವರದಿ ಮಂಡಿಸಿ, ಸದಸ್ಯರು ಕೆಎಲ್‌ಇ ಹೆಲ್ತ್ ಕಾರ್ಡ್ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅತ್ಯುತ್ತಮ ಶಾಖೆಗಳಿಗೆ ಪ್ರಶಸ್ತಿ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಾಖೆಗಳ ಸಿಬ್ಬಂದಿ ಹಾಗೂ ಅಲ್ಲಿನ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದ್ದು, ಈ ವರ್ಷ ನಗರ ವಿಭಾಗದಲ್ಲಿ ಬೆಳಗಾವಿ ಶಾಖೆ ಪ್ರಥಮ ಹಾಗೂ ಗ್ರಾಮೀಣ ವಿಭಾಗದಲ್ಲಿ ಕಬ್ಬೂರ ಶಾಖೆ ಪ್ರಥಮ ಸ್ಥಾನ ಪಡೆದುಕೊಂಡವು.
ವಿಜಯ ಮೆಟಗುಡ್ಡ, ಲಕ್ಷಯ ರೆಡ್ಡಿ, ಭರತೇಶ ಬನವನೆ, ಉಪಾಧ್ಯಕ್ಷರಾದ ಸಿದಗೌಡ ಮಗದುಮ್ಮ, ಅಣ್ಣಾಸಾಹೇಬ ಸಂಕೇಶ್ವರಿ, ಬಸನಗೌಡ ಆಸಂಗಿ, ಡಾ. ಸುಕುಮಾರ ಚೌಗುಲೆ, ಪಿಂಟು ಹಿರೇಕುರುಬರ,ಅಮೀತ ಜಾಧವ, ಪ್ರಫುಲ್ ಶೆಟ್ಟಿ, ಬಾಳಪ್ಪ ಉಮರಾಣಿ, ಅಶೋಕ ಚೌಗಲಾ, ಅನಿಲ ಪಾಟೀಲ, ಶ್ರೀಕಾಂತ ಉಮರಾಣೆ, ಶೋಭಾ ಜಕಾತೆ, ಶೈಲಜಾ ಪಾಟೀಲ, ಪಾರ್ವತಿ ಧರನಾಯಿಕ, ಜಯಶ್ರೀ ಮೇದಾರ ಇತರರು ಇದ್ದರು. ವ್ಯವಸ್ಥಾಪಕಿ (ಆಡಳಿತ) ಸುನಂದಾ ಮಗದುಮ್ಮ ನಿರೂಪಿಸಿದರು.