ಸಂಕಷ್ಟದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳು, ರಾಜ್ಯ ಸರ್ಕಾರದಿಂದ ಮೊಂಡುತನ ಪ್ರದರ್ಶನ, ಕೇಂದ್ರದ ಸಾಲ ಯೋಜನೆ ಜಾರಿಗೊಳಿಸಿ ಎಂದ ಗುರುಲಿಂಗಪ್ಪ ಅಂಗಡಿ

GURULINGAPP ANAGADI PRESS MEET FACTORY
ವಿಜಯಪುರ ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸುದ್ದಿಗೋಷ್ಠಿ ನಡೆಸಿದರು. ಮುಖಂಡರಾದ ಸಂಜಯ ಪಾಟೀಲ ಕನಮಡಿ, ಈರಣ್ಣ ರಾವೂರ ಇದ್ದಾರೆ.
Published on

ವಿಜಯಪುರ: ಸಂಕಷ್ಟದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳ ಪುನಃಶ್ಚೇತನಕ್ಕಾಗಿ ಕೇಂದ್ರ ಸರ್ಕಾರಿ ಜಾರಿಗೊಳಿಸಿರುವ ಸಾಲ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ರಾಜ್ಯದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳು ಸಂಕಷ್ಟಕ್ಕೆ ಸಿಲುಕಿವೆ. ಜಿಲ್ಲೆಯಲ್ಲಿಯೇ ಎರಡು ಸಹಕಾರಿ ಸಕ್ಕರೆ ಕಾರ್ಖಾನೆಗಳಿದ್ದು, ಸಾಲದ ಸುಳಿಯಲ್ಲಿವೆ. ಆರ್ಥಿಕವಾಗಿ ಸಂಕಷ್ಟದ ಸ್ಥಿತಿ ಎದುರಿಸುತ್ತಿದ್ದು, ಕೇಂದ್ರ ಸರ್ಕಾರದ ಸಾಲ ಸೌಲಭ್ಯ ದೊರೆತರೆ ಸಾಕಷ್ಟು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ದೇಶದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳು ಸಂಕಷ್ಟದಲ್ಲಿರುವುದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಹಕಾರಿ ಸಚಿವ ಅಮಿತ್ ಷಾ ಅವರು ಕಡಿಬೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೊಳಿಸಿದ್ದಾರೆ. ಈಗಾಗಲೇ ನೆರೆಯ ಮಹಾರಾಷ್ಟ್ರ ಸರ್ಕಾರ ಈ ಸಾಲದ ಸೌಲಭ್ಯ ಪಡೆದು ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಪುನಃಶ್ಚೇತನಗೊಳಿಸಿದೆ. ಹೀಗಾಗಿ ರಾಜ್ಯದಲ್ಲೂ ಈ ಯೋಜನೆ ಜಾರಿಗೊಳಿಸಬೇಕೆಂದರು.

ಸದ್ಯ ಈ ಯೋಜನೆ ಜಾರಿಗೊಂಡರೆ ಬಿಜೆಪಿ ಕ್ರೆಡಿಟ್ ಸಿಗಲಿದೆ ಎಂಬ ಕಾರಣಕ್ಕಾಗಿಯೋ ಏನೋ ಸಿಎಂ ಸಿದ್ದರಾಮಯ್ಯ ಯೋಜನೆ ಅನುಷ್ಟಾನಕ್ಕೆ ಮುಂದಾಗುತ್ತಿಲ್ಲ. ಮೊಂಡುತನ ಬಿಟ್ಟು ಯೋಜನೆ ಜಾರಿಗಳಿಸಬೇಕು. ಜಿಲ್ಲೆಯವರೇ ಆಗಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಹೊಂದಿರುವ ಬಬಲೇಶ್ವರ ಕ್ಷೇತ್ರದ ಶಾಸಕರೂ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಎಂ.ಬಿ. ಪಾಟೀಲ ಹಾಗೂ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರೂ ಆಗಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಬೀಳಗಿ ಶಾಸಕ ಜೆ.ಟಿ. ಪಾಟೀಲರು ಕೇಂದ್ರ ಸರ್ಕಾರದ ಸಾಲದ ಯೋಜನೆ ಜಾರಿಗೆ ಮುಂದಾಗಬೇಕು. ಇಲ್ಲವೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಈಗಾಗಲೇ ಯೋಜನೆಯ ಅವಧಿ ಮುಕ್ತಾಯಗೊಂಡಿದೆ. ಆದರೂ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅವಕಾಶ ನೀಡಲು ಮುಂದೆ ಬಂದಿದೆ. ಹೀಗಾಗಿ ಮೊಂಡುತನ ಬಿಟ್ಟು ಯೋಜನೆ ಅನುಷ್ಟಾನಕ್ಕೆ ಮುಂದಾಗಬೇಕೆಂದು ಅಂಗಡಿ ಒತ್ತಾಯಿಸಿದರು.

ಮುಖಂಡರಾದ ಸಂಜಯ ಪಾಟೀಲ ಕನಮಡಿ ಹಾಗೂ ಈರಣ್ಣ ರಾವೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net