

ಕೊಪ್ಪಳ: ಸಹಕಾರ ಸಂಘಗಳು ನೌಕರರಿಗೆ ಜೀವಾಳ. ಅವರ ಅಗತ್ಯಕ್ಕೆ ತಕ್ಕಂತೆ ಸೇವೆ ನೀಡುವ ಮೂಲಕ ಸಹಕಾರಿಯಾಗಿವೆ ಎಂದು ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ಎ.ಆರ್.ಶಿವಾನಂದ ಹೇಳಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪಿಯು ಕಾಲೆಜುಗಳ ನೌಕರರ ಪತ್ತಿನ ಸಹಕಾರ ಸಂಘದ 14ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಸಂಘದಲ್ಲಿ ಸಾಲಕ್ಕೆ ಇರುವ ಮಹತ್ವ ಅದನ್ನು ಪಾವತಿಸುವುದರಲ್ಲೂ ಇದೆ. ಸರಿಯಾದ ವ್ಯವಹಾರ ನಡೆಬೇಕು. ಇದರಿಂದ ನಮ್ಮ ಸದಸ್ಯರಿಗೆ ಅನುಕೂಲ ಹೆಚ್ಚು. ಇತರರಿಗೂ ಸಾಲ ನೀಡಲು ಸಹಾಯವಾಗಲಿದೆ. ಸಹಕಾರಿ ಸಂಘ ಬೆಳೆಯಲು ದಾರಿಯಾಗಲಿದೆ. ಇದನ್ನು ಎಲ್ಲ ಸದಸ್ಯರು ಅರಿಯಬೇಕು ಎಂದರು.
ಪ್ರಾಚಾರ್ಯ ರಾಜಶೇಖರ ಪಾಟೀಲ್ ಮಾತನಾಡಿ, ಸಹಕಾರಿ ಸಂಘಗಳು ಹುಟ್ಟಿರುವುದೇ ಮಧ್ಯಮ ವರ್ಗದವರಿಗೆ ಅನುಕೂಲವಾಗಲೆಂದು. ಇದರ ಸದುಪಯೋಗ ಪಡೆಯಿರಿ. ನಿಯಮಾವಳಿಗೆ ತಕ್ಕಂತೆ ಲೇವಾದೇವಿ ನಡೆಸಿ. ಸಾಲ ಪಡೆದು ಸಕಾಲದಲ್ಲಿ ತೀರಿಸಿ ಎಂದು ಸಲಹೆ ನೀಡಿದರು.
ಪ್ರಾಚಾರ್ಯರಾದ ಎಚ್.ಎಸ್.ದೇವರಮನಿ, ವಾಸುದೇವ ಅಡವಿಬಾವಿ, ನಿವೃತ್ತ ಉಪನ್ಯಾಸಕ ಎ.ವಿ.ಉಪದ್ಯಾಯ, ಉಪನ್ಯಾಸಕ ಪತ್ರೆಪ್ಪ ಛತ್ತರಕಿ ಮಾತನಾಡಿದರು. ಉಪನ್ಯಾಸಕರಾದ ಎಸ್.ವಿ.ಮೇಳಿ, ಸಂಘದ ಅಧ್ಯಕ್ಷ ವಿದ್ಯಾಧರ ಮೇಘರಾಜರವರು ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಕಳೆದ ಸಾಲಿನಲ್ಲಿ ದ್ವೀತಿಯ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾದ ಮೇಘನಾ ಕೊಟ್ನೆಕಲ್, ತೇಜಶ್ವಿನಿ ವಿ. ಪತ್ತಾರ ಸನ್ಮಾನಿಸಲಾಯಿತು.