

ಇಂಡಿ: ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ನೂತನ ಕಾರ್ಯಾಲಯದ ಕಟ್ಟಡದ ಉದ್ಘಾಟನಾ ಸಮಾರಂಭ ಜೂ.2 ರಂದು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆ ಉಪಾಧ್ಯಕ್ಷ ಅಣ್ಣಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಕಾರ್ಯಾಲಯದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈ ರೈತಪರ ಸಂಘವನ್ನು ಸ್ವಾತಂತ್ರೃ ನಂತರದಲ್ಲಿ ದಿ. ಬಾಬಾಗೌಡ ಪಾಟೀಲರು 1954ರಲ್ಲಿ ಸ್ಥಾಪಿಸಿದರು. ಈ ಸಂಘವು ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ರೈತರ ಅನುಕೂಲಕ್ಕಾಗಿ ರಸಗೊಬ್ಬರ ಮಾರಾಟದ ಜೊತೆಗೆ ಗೋದಾಮುಗಳನ್ನು ನಿರ್ಮಿಸಿ ರೈತರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ ಎಂದರು.
ಸಂಘ ಸ್ಥಾಪನೆಯಾಗಿ 70 ವರ್ಷ ಗತಿಸಿದ ನಂತರ ಸುಸಜ್ಜಿತ ಕಟ್ಟಡ ನಿರ್ಮಿಸಿದ್ದು, ಕಟ್ಟಡ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ಹಮ್ಮಿಕೊಂಡಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಲು ಕೋರಿದರು.
ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಹಾಗೂ ಗೋಳಸಾರ ಅಭಿನವ ಪುಂಡಲಿಂಗ ಮಹಾ ಶಿವಯೋಗಿಗಳು ಸಾನ್ನಿಧ್ಯ ವಹಿಸುವರು. ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಸಂಸದ ರಮೇಶ ಜಿಗಜಿಣಗಿ ಸಹಕಾರಿ ಧ್ವಜಾರೋಹಣ ಹಾಗೂ ಸಚಿವ ಶಿವಾನಂದ ಪಾಟೀಲ ಸಹಕಾರಿ ಧ್ವಜಾರೋಹಣ ನೆರವೇರಿಸುವರು. ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಸಭಾಭವನ ಹಾಗೂ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ ವಾಣಿಜ್ಯ ಸಂಕೀರ್ಣ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಸುನೀಲ್‌ಗೌಡ ಪಾಟೀಲ ಶುದ್ಧ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಮಾಜಿ ಶಾಸಕರಾದ ಡಾ. ಸಾರ್ವಭೌಮ ಬಗಲಿ, ರವಿಕಾಂತ ಪಾಟೀಲ, ಬಿ.ಜಿ. ಪಾಟೀಲ ಹಲಸಂಗಿ, ಬಾಬು ಸಾಹುಕಾರ ಮೇತ್ರಿ, ಎಂ.ಆರ್. ಪಾಟೀಲ, ಬಾಬುಗೌಡ ಪಾಟೀಲ, ಭೀಮರಾಯಗೌಡ ಪಾಟೀಲ, ಅನಂತ ಕೋಟಿ, ಬಿ.ಎಂ. ಕೋರೆ, ನಿಂಬಾಜಿ ರಾಠೋಡ, ಕಲ್ಲನಗೌಡ ಪಾಟೀಲ, ಭೀಮನಗೌಡ ಪಾಟೀಲ ಮತ್ತಿತರರು ಆಗಮಿಸುವರೆಂದು ಹೇಳಿದರು.
ಗುರುನಾಥ ಮೈತ್ರಿ, ಶಿವನಗೌಡ ಪಾಟೀಲ, ರಾಜುಗೌಡ ಪಾಟೀಲ, ವಿಜಯಕುಮಾರ ನಿಡಗುಂದಿ, ಬಸವರಾಜ ಲವಗಿ, ಮಲ್ಲು ಗುಡ್ಲ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಜಿ. ಕಾವಿ, ಜಿ.ಎಸ್. ಹೊಸಮನಿ, ಕೆ.ಡಿ. ಕುಲಕರ್ಣಿ ಇದ್ದರು.