

ವಿಜಯವಾಣಿ ಸುದ್ದಿಜಾಲ ಧಾರವಾಡ
ಮುಧೋಳದ ವಿಜಯ (ಎಂಆರ್ಎನ್) ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘದ ಧಾರವಾಡ ಶಾಖೆ ಉದ್ಘಾಟನಾ ಸಮಾರಂಭವನ್ನು ಡಿ. 5ರಂದು ಸಂಜೆ 4 ಗಂಟೆಗೆ ಏರ್ಪಡಿಸಲಾಗಿದೆ ಎಂದು ಹುಬ್ಬಳ್ಳಿ ಶಾಖೆ ಸಲಹಾ ಸಮಿತಿ ಸದಸ್ಯ ಎಂ.ಆರ್. ಪಾಟೀಲ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಪ್ತಾಪುರದ ಅರಿಹಂತ ಅಪಾರ್ಟ್ಮೆಂಟ್ನ ಆವರಣದಲ್ಲಿ ಶಾಖೆ ಆರಂಭಿಸಿದ್ದು, ಉದ್ಘಾಟನಾ ಸಮಾರಂಭವನ್ನು ಶ್ರೀ ಸತ್ಯಸಾಯಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದರು.
ಮುರಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಸಮಾರಂಭ ಉದ್ಘಾಟಿಸುವರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಧಾರವಾಡ ಹಾಲು ಒಕ್ಕೂಟದ ನಿರ್ದೇಶಕಿ ಶಿವಲೀಲಾ ಕುಲಕರ್ಣಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮಾಜಿ ಸಚಿವ ಮುರಗೇಶ ನಿರಾಣಿ ಅವರು ಸ್ಥಾಪಿಸಿರುವ ಈ ಬ್ಯಾಂಕ್, ಸದ್ಯ ರಾಜ್ಯಾದ್ಯಂತ 64 ಶಾಖೆಗಳನ್ನು ಹೊಂದಿದೆ. ಆರಂಭದಲ್ಲಿ 400 ಸದಸ್ಯರಿಂದ 10 ಲಕ್ಷ ರೂ. ಬಂಡವಾಳದಿಂದ ಆರಂಭವಾಗಿ ಪ್ರಸ್ತುತ 1,70,000ಕ್ಕೂ ಅಧಿಕ ಸದಸ್ಯರು ಹಾಗೂ 10.60 ಕೋಟಿ ರೂ. ಶೇರು ಬಂಡವಾಳ ಹೊಂದಿದೆ ಎಂದರು.
ಪ್ರತಿ ವರ್ಷ ಸದಸ್ಯರಿಗೆ ದಾಖಲೆಯ ಶೇ. 25ರಷ್ಟು ಲಾಭಾಂಶ ಹಂಚಿಕೆ ಮಾಡಿದ ಕರ್ನಾಟಕದ ಏಕೈಕ ಸಹಕಾರಿ ಸಂಘ ಇದಾಗಿದೆ. ಮುಂದಿನ ದಿನಗಳಲ್ಲಿ 125 ಶಾಖೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ. ಸಹಕಾರಿಯ ಎಲ್ಲ ಸಿಬ್ಬಂದಿಗೆ ಉಚಿತ ಆರೋಗ್ಯ ವಿಮೆ ಇಎಸ್ಐ ಸೌಲಭ್ಯ ಜತೆಗೆ ಸಹಕಾರಿ ಸದಸ್ಯರಿಗೆ ಜೀವವಿಮೆ ಹಾಗೂ ಅಪಘಾತ ವಿಮೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಪ್ರೊ. ಎಲ್.ಜೆ. ಪೋಳ, ರಮೇಶ ಬಳ್ಳೂರ, ಪ್ರಕಾಶ ಬಿರಾದಾರ, ಆನಂದ ಕುಲಕಣಿರ್, ಇತರರು ಇದ್ದರು.