

ಯಳಂದೂರು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಕೃಷಿ ಇಲಾಖೆಯ ವತಿಯಿಂದ ಸಬ್ಸಿಡಿ ದರದಲ್ಲಿ ನೀಡಿರುವ ಟ್ರ್ಯಾಕ್ಟರ್ ದುರ್ಬಳಕೆಯಾಗುತ್ತಿದ್ದು, ಇದನ್ನು ನಿರ್ವಹಿಸಲು ಆಗದಿದ್ದಲ್ಲಿ ಮಾರಿಬಿಡಿ ಎಂದು ಸದಸ್ಯರು ಆಗ್ರಹಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಮಹಾಸಭೆಯಲ್ಲಿ ಈ ವಿಷಯ ಪ್ರಸ್ತಾಪಕ್ಕೆ ಬಂದಾಗ ಸಹಕಾರ ಸಂಘದಲ್ಲಿ ಇದ್ದ ಟ್ರ್ಯಾಕ್ಟರ್ ಅನ್ನು ಖಾಸಗಿ ವ್ಯಕ್ತಿಗೆ ಬಾಡಿಗೆಗೆ ನೀಡಲಾಗಿದೆ. ಆದರೆ ಇದನ್ನು ರೈತರಿಗೆ ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡಬೇಕು. ಇದಕ್ಕೊಬ್ಬ ಚಾಲಕನನ್ನು ನೇಮಿಸಿಬೇಕು. ಪ್ರತಿನಿತ್ಯ ಸಂಜೆ ಇದು ಕಚೇರಿಯ ಮುಂಭಾಗದಲ್ಲಿರಬೇಕು ಎಂಬ ನಿಯಮವಿದೆ. ಆದರೆ ನಿಯ ಗಾಳಿಗೆ ತೂರಲಾಗಿದೆ. ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿದೆ ಎಂಬ ನೆಪವೊಡ್ಡಿ ಖಾಸಗಿ ವ್ಯಕ್ತಿಗೆ ನೀಡಲಾಗಿದೆ ಎಂದು ಸದಸ್ಯರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಲ್ಲಿಕಾರ್ಜುನ, ಇದರ ನಿರ್ವಹಣೆಗೆ ತೊಂದರೆಯಾದ ಹಿನ್ನೆಲೆಯಲ್ಲಿ ಇದನ್ನು ಹೀಗೆ ಮಾಡಲಾಗಿದೆ ಮುಂದಿನ ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದರು.
ಅಲ್ಲದೆ ಸಾಲಗಾರರಿಂದ ಹೆಚ್ಚುವರಿಯಾಗಿ ದಾಖಲೆ ನಿರ್ವಹಣೆಗೆ ಹಣವನ್ನು ವಸೂಲಿ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ರೈತ ಮುಖಂಡ ಶಿವಕುಮಾರ್ ದೂರಿದರು. ಇದಕ್ಕೆ ಸ್ಪಷ್ಟನೆ ನೀಡಿದ ಅಧ್ಯಕ್ಷರು, ಇಸಿ ಸೇರಿದಂತೆ ಇತರ ದಾಖಲೆಗಳನ್ನು ಸರಿದೂಗಿಸಲು ಈ ಹಣವನ್ನು ಹೊಂದಿಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪುಟ್ಟರಾಜು ಸಂಘದ ವಾರ್ಷಿಕ ವರದಿ ಮಂಡಿಸಿ, 20023 ಮಾರ್ಚ್ ಅಂತ್ಯಕ್ಕೆ ಸಂಘಕ್ಕೆ 2.1 ಲಕ್ಷ ರೂ. ಲಾಭ ಬಂದಿದೆ. ಅಲ್ಲದೆ 50 ಸ್ವಸಹಾಯ ಸಂಘಗಳಿಂದ 7.50 ಲಕ್ಷ ರೂ. ಉಳಿತಾಯ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಸಿ.ಬಾಬುಸ್ವಾಮಿ, ನಿರ್ದೇಶಕರಾದ ವೈ.ಎಸ್.ನಂಜಶೆಟ್ಟಿ, ಎಂ.ಅನಿಲ, ಎಸ್.ನಿಂಗರಾಜು, ವೈ.ಎಂ.ಜಯರಾಮು, ವೈ.ಬಿ.ಮಹೇಶ್, ಎಂ.ರಾಜಶೇಖರ್, ಎಸ್.ರಾಜಮ್ಮ, ಪುಟ್ಟಚಾಮಮ್ಮ ಮಾದೇಶ್, ರವಿ, ಲೆಕ್ಕಿಗ ಡಿ.ಪಿ.ರವಿಕುಮಾರ್, ಎಸ್.ರಾಕೇಶ್, ಕೆ.ಶಿವಕುಮಾರ್ ಸೇರಿದಂತೆ ಇತರರು ಇದ್ದರು.