

ತೇರದಾಳ: ಆಡಳಿತ ಮಂಡಳಿ ಮತ್ತು ಸಹಕಾರಿ ಸದಸ್ಯರ ಸಹಕಾರ, ಗ್ರಾಮೀಣ ಭಾಗದಲ್ಲಿರುವ ಸಹಕಾರಿ ಸಿಬ್ಬಂದಿಯ ಪ್ರಾಮಾಣಿಕ ಸೇವೆ ಹಾಗೂ ಶ್ರೀಮಠದ ಸಂಸ್ಕಾರದಿಂದ ಹಣಕಾಸಿನ ವ್ಯವಹಾರಗಳಲ್ಲಿ ವರ್ಷದಿಂದ ವರ್ಷಕ್ಕೆ ಪ್ರಗತಿಯಾಗಿದೆ ಎಂದು ಕಮರಿಮಠದ ಪೀಠಾಧಿಪತಿ, ಸಹಕಾರಿ ಕಾರ್ಯಾಧ್ಯಕ್ಷ ಶಿವಾನಂದ ಸ್ವಾಮೀಜಿ ಹೇಳಿದರು.
ಸಮೀಪದ ಹಳಿಂಗಳಿ ಗ್ರಾಮದ ಶರಣಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ. ದ 16ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಅವರು ಮಾತನಾಡಿದರು.
ಹಣಕಾಸು ಸಂಸ್ಥೆಗಳ ಅಭಿವೃದ್ಧಿಯಲ್ಲಿ ಠೇವಣಿದಾರರ ಭರವಸೆ ಮತ್ತು ಸಾಲದಾರರ ಪ್ರಾಮಾಣಿಕತೆ ಬಹಳ ಮುಖ್ಯವಾಗಿದೆ. ಶ್ರೀಮಠವು ಸಾಮಾಜಿಕ ಕ್ಷೇತ್ರದಲ್ಲಿ ಪ್ರತಿಯೊಬ್ಬರಿಗೂ ಹಣಕಾಸಿನ ಅನುಕೂಲತೆ ಕಲ್ಪಿಸಿ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಜನಸೇವೆ ಜನಾರ್ದನ ಸೇವೆ ಎಂಬ ತತ್ವದಡಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಮುಖ್ಯ ಅತಿಥಿಗಳಾದ ನಿವೃತ್ತ ಶಿಕ್ಷಕ ಎಂ.ಸಿ.ಕುಂಚಗನೂರ, ಪ್ರಸನ್ನಕುಮಾರ ಜಮಖಂಡಿ ಮಾತನಾಡಿ, ಶ್ರೀಮಠವು ಸ್ವಾರ್ಥರಹಿತವಾದ ಸೇವೆಯ ಮೂಲಕ ಶೈಕ್ಷಣಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಗಾಧವಾಗಿ ಬೆಳೆಯುತ್ತಿದೆ. ಅದಕ್ಕೆ ಸಾಮಾಜಿಕ ಕಳಕಳಿವುಳ್ಳ ಶ್ರೀಗಳ ಸದಿಚ್ಛೆ ಹಾಗೂ ಭಕ್ತಿಯ ಸೇವೆಯೇ ಕಾರಣವಾಗಿದೆ ಎಂದರು.
ಸಹಕಾರಿಯ ಕಾರ್ಯದರ್ಶಿ ಜೆ.ಬಿ.ಕಲ್ಲೊಳ್ಳಿ ವರದಿ ವಾಚಿಸಿ ಮಾತನಾಡಿ, ಸಹಕಾರಿಯು 3459 ಸದಸ್ಯರನ್ನು ಒಳಗೊಂಡಿದ್ದು, 89.48 ಲಕ್ಷ ಷೇರು ಬಂಡವಾಳ, 30.10 ಲಕ್ಷ ಲಾಭಾಂಶ ಹೊಂದಿದೆ. ಶೇ.10 ರಷ್ಟು ಡಿವಿಡೆಂಡ್ ವಿತರಿಸಲಾಗುತ್ತಿದೆ.
ಠೇವಣಿ ಬಡ್ಡಿ ಜಮಾ ಸೇರಿದಂತೆ ಸಹಕಾರಿ ಸಂಪೂರ್ಣ ಆನಲೈನ್ ಸೇವೆಯನ್ನು ಒಳಗೊಂಡಿದೆ ಎಂದರು.
ಸಹಕಾರಿ ಉಪಾಧ್ಯಕ್ಷ ಭೀಮಪ್ಪ ನಂದಗಾಂವ, ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಮಗೆಪ್ಪ ದೇಸಾಯಿ, ರುದ್ರಪ್ಪ ಆಲಗುಂಡಿ, ನಂದೇಶ್ವರ ಗ್ರಾಪಂ ಅಧ್ಯಕ್ಷ ರಾಮಪ್ಪ ಪರಟಿ, ನ್ಯಾಯವಾದಿ ಬಿ.ಎನ್.ಗುರವ, ಗಂಗಪ್ಪ ಗಣವಾಡಿ, ರಾಮಪ್ಪ ತೇಲಿ, ಸಾವಿತ್ರಿ ಗೌಡಪ್ಪನ್ನವರ, ಮಲ್ಲಪ್ಪ ತಮದಡ್ಡಿ, ಅಪ್ಪಾಸಾಬ ಮುಧೋಳ, ಈರಣ್ಣ ತೇಲಿ ಹಾಗೂ ಸಹಕಾರಿ ಆಡಳಿತ ಮಂಡಳಿ ಸದಸ್ಯರು ಇದ್ದರು.