

ಅರಸೀಕೆರೆ: ಸಹಕಾರಿ ಬ್ಯಾಂಕ್‌ಗಳು ಬಡ ಹಾಗೂ ಮಧ್ಯಮ ವರ್ಗದ ಜನರ ಜೀವನಾಡಿ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದ ಶ್ರೀ ಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ದಿ ಅರಸೀಕೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ ಬೆಳ್ಳಿಹಬ್ಬ, ಸುವರ್ಣ ಮಹೋತ್ಸವ ಹಾಗೂ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.
ಅನ್ನದಾತರು, ಜನಸಾಮಾನ್ಯರ ಹಿತ ಮನಗಂಡು ಕೃಷಿ ಹಾಗೂ ಉದ್ಯೋಗ ಉತ್ತೇಜಿಸಲು ಶತಮಾನದ ಹಿಂದೆ ಸಹಕಾರಿ ಸಂಘ ಸ್ಥಾಪನೆಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಸಂಘಗಳು ಕೆಲಸ ಮಾಡುತ್ತಿವೆ ಎನ್ನುವುದಕ್ಕೆ ಬೆಳಗಾವಿ ಜಿಲ್ಲೆ ಸಹಕಾರಿ ಬ್ಯಾಂಕ್‌ಗಳು ಉದಾಹರಣೆಯಾಗಿದೆ. ಬಡ್ಡಿ ಸರಳೀಕರಣ, ಬಲವಂತದ ವಸೂಲಾತಿ ಕ್ರಮಗಳು ಕಡಿಮೆಯಾಗುತ್ತಿರುವುದು ಹಾಗೂ ಆರ್ಥಿಕ ಚಟುವಟಿಕೆಗಳು ಚೈತನ್ಯ ಪಡೆದುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದರು.
ಹಿರಿಯರ ಪರಿಶ್ರಮದಿಂದ 62 ವರ್ಷಗಳ ಹಿಂದೆ ಅರಸೀಕೆರೆ ನಗರದಲ್ಲಿ ಆರಂಭಗೊಂಡಿರುವ ದಿ ಅರಸೀಕೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸೇವ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದು ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಆಶಿಸಿದರು.
ಬ್ಯಾಂಕಿನ ಅಧ್ಯಕ್ಷ ಕೆ.ರಮೇಶ್ ಮಾತನಾಡಿ, ದಿ ಅರಸೀಕೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ನಗರ ನಿವಾಸಿಗಳ ಗ್ರಾಹಕ ಸ್ನೇಹಿ ಸಹಕಾರ ಬ್ಯಾಂಕ್ ಎಂದೇ ಗುರುತಿಸಿಕೊಂಡಿದೆ. ಸುದೀರ್ಘ ಸೇವೆ ಮನಗಂಡು ಬೆಳ್ಳಿಹಬ್ಬ ಹಾಗೂ ಸುವರ್ಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಜನಸ್ನೇಹಿ ಸಹಕಾರಿ ಬ್ಯಾಂಕಿನ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ದಿಸೆಯಲ್ಲಿ ಶ್ರಮಿಸಲಾಗುತ್ತಿದೆ. ಬ್ಯಾಂಕ್ ವಾರ್ಷಿಕ 361.82 ಕೋಟಿ ರೂ.ಗಳಷ್ಟು ವಹಿವಾಟು ನಡೆಸುತ್ತಿದೆ. ಇದರಲ್ಲಿ 5317 ಷೇರು ಖಾತೆದಾರರು, ಫಿಕ್ಸೆಡ್ ಡೆಪಾಸಿಟ್, ಪಿಗ್ಮಿ, ಉಳಿತಾಯ ಖಾತೆ, ಆರ್.ಡಿ(ರೆಕರಿಂಗ್ ಡೆಪಾಸಿಟ್)ಸೇರಿ ಇತರ 10 ಸಾವಿರ ಖಾತೆದಾರರನ್ನು ಹೊಂದಿರುವ ಹೆಗ್ಗಳಿಕೆಗೆ ಬ್ಯಾಂಕ್ ಪಾತ್ರವಾಗಿದೆ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಎಸ್.ಅರುಣ್ ಕುಮಾರ್ ಮಾತನಾಡಿ, ದಶಕಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಆರಂಭವಾಗಿದ್ದ ಸಹಕಾರ ಬ್ಯಾಂಕ್ ವಾರ್ಷಿಕ ಆರು ಕೋಟಿ ರೂ. ಲಾಭದತ್ತ ದಾಪುಗಾಲಿಟ್ಟಿರುವುದು ಶ್ಲಾಘನೀಯ. ಎಲ್ಲ ವರ್ಗ, ಸಮುದಾಯದ ಜನರನ್ನು ಹೊಂದಿರುವ ಏಕೈಕ ಬ್ಯಾಂಕ್ ಎಂದು ಬಣ್ಣಿಸಿದರು.
ದಿ ಅರಸೀಕೆರೆ ಅರ್ಬನ್ ಕೋ-ಆಪರೇಟೀವ್ ಬ್ಯಾಂಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಲಾಯಿತು. ಬ್ಯಾಂಕ್ ವತಿಯಿಂದ ನೂತನ ಎಟಿಎಂ ಕಾರ್ಡನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು.
ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ಉಪಾಧ್ಯಕ್ಷ ಕೀರ್ತಿ, ನಿರ್ದೇಕರಾದ ಪ್ರಸನ್ನಕುಮಾರ್, ಚಂದ್ರಯ್ಯ, ಮಂಜುನಾಥ್, ಚಿಕ್ಕಣ್ಣ, ಅಬ್ದುಲ್ ಜಮೀಲ್, ಮಹಾಲಿಂಗಸ್ವಾಮಿ, ಜಗದಾಂಬ, ಲಾವಣ್ಯ, ಗೀಜಿಹಳ್ಳಿ ರವಿ, ವಿಜಯಕುಮಾರ್, ಚಂದ್ರಶೇಖರಪ್ಪ, ಕುಮಾರ್ ಹಾಗೂ ವ್ಯವಸ್ಥಾಪಕ ರುದ್ರಮುನಿಸ್ವಾಮಿ, ಚಂದ್ರು ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದರು.