ಕೃಷಿ ಪತ್ತಿನ ಸಹಕಾರ ಬ್ಯಾಂಕ್​ನಲ್ಲಿ 1 ಕೋಟಿಗೂ ಅಧಿಕ ಗೋಲ್​ಮಾಲ್​

20230928_170514
Published on

ಸಾಲ ನೀಡಲು ಕೆಸಿಸಿ ಬ್ಯಾಂಕ್​ ಹಿಂದೇಟು! ರೈತರು ಕಂಗಾಲು! ಎಸ್​.ಕೆ. ದೇಸಾಯಿ ನಾಪತ್ತೆ

ಶಿವಾನಂದ ಹಿರೇಮಠ ಗದಗ
ತಾಲೂಕಿನ ಹರ್ಲಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್​ನಲ್ಲಿ(ಪ್ಯಾಕ್ಸ್​) ಕೋಟಿಗೂ ಅಧಿಕ ಅವ್ಯವಹಾರ ನಡೆದಿದ್ದು, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡಲು ಕೆಸಿಸಿ ಬ್ಯಾಂಕ್​ ಹಿಂದೇಟು ಹಾಕಿದೆ. ಬೆಳೆ ಸಾಲ ದೊರೆಯದೇ ಗ್ರಾಮದ ರೈತರು ಕಂಗಾಲಾಗಿದ್ದು, ಬುಧವಾರ ಬ್ಯಾಂಕ್​ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪ್ಯಾಕ್ಸ್​ ವ್ಯವಹಾರ ಸರಿ ಇಲ್ಲದ ಕಾರಣ ಕೆಸಿಸಿ ಬ್ಯಾಂಕ್​ ನಿಯಮಾನುಸಾರ ಸಾಲ ಮಂಜೂರಾತಿ ನೀಡಿಲ್ಲ. ಅವ್ಯವಹಾರ ನಡೆಸಿದ ಎಸ್​.ಕೆ. ದೇಸಾಯಿ ಗ್ರಾಮದಿಂದ ನಾಪತ್ತೆಯಾಗಿದ್ದಾರೆ. ಇಬ್ಬರ ಜಗಳದಲ್ಲಿ ಕೂಸು ಬಡವಾದಂತೆ ಗ್ರಾಮದ ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಏನಿದು ಪ್ರಕರಣ?
ಹರ್ಲಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಕಳೆದೆರೆಡು ವರ್ಷದಿಂದ ಲೆಕ್ಕಪತ್ರ ವ್ಯವಹಾರ ಸರಿ ಇಲ್ಲ. ರೈತರಿಗೆ 2.38 ಕೋಟಿಗೂ ಅಧಿಕ ಸಾಲ ನೀಡಲಾಗಿತ್ತು. ರೈತರು ಮರು ಪಾವತಿ ಮಾಡಿದ್ದು, ತಮ್ಮ ಸಾಲದ ಖಾತೆಗಳನ್ನು ನವೀಕರಣ ಮಾಡಿದ್ದಾರೆ. ಆದರೆ, ರೈತರು ಮರು ಪಾವತಿ ಮಾಡಿದ 1 ಕೋಟಿಗೂ ಅಧಿಕ ಹಣವನ್ನು ಬ್ಯಾಂಕಿನ್​ ಕಾರ್ಯದಶಿರ್ ಎಸ್​.ಕೆ. ದೇಸಾಯಿ ಎಂಬುವರು ಕೆಸಿಸಿ ಬ್ಯಾಂಕಿಗೆ ವರ್ಗಾಯಿಸಿಲ್ಲ. ಕೆಲ ರೈತರ ಖಾತೆಯಲ್ಲಿ ಸಾಲದ ಬೋಜ ನಮೂದಿಸಿ ರೈತರಿಗೆ ಸಾಲ ನಿಡದೇ ಲಪಟಾಯಿಸಿದ್ದಾರೆ ಮತ್ತು ರೈತರು ಬ್ಯಾಂಕಿನಲ್ಲಿ ಇಟ್ಟ ಹತ್ತಾರು ಲಕ್ಷ ಠೇವಣಿ ಹಣದಲ್ಲಿ ಅವ್ಯವಹಾರ ಜರುಗಿದೆ ಎಂಬ ಆರೋಪವನ್ನು ರೈತರು ಮಾಡಿದ್ದಾರೆ. ಈ ಅವ್ಯವಹಾರ ಮುಚ್ಚಿಹಾಕು ಹಿನ್ನೆಲೆ ಕಳೆದ ಎರಡೂ ವರ್ಷದಿಂದ ಬ್ಯಾಂಕಿನ ಲೆಕ್ಕ ಪರಿಶೋಧನೆಯೂ ನಡೆಸಿರಲಿಲ್ಲ. ಈ ನಡುವೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲಕ್ಕಾಗಿ ರೈತರು ಬ್ಯಾಂಕಿಗೆ ಅಜಿರ್ ಸಲ್ಲಿಸಿದ್ದಾರೆ. " ಈ ಹಿಂದಿನ ಸಾಲದ ಮರುಪಾವತಿ ಆಗಿಲ್ಲ. ಹೀಗಾಗಿ ಸಾಲ ಮಂಜೂರು ಸಾಧ್ಯವಿಲ್ಲ' ಎಂದು ಕೆಸಿಸಿ ಬ್ಯಾಂಕ್​ ಅಧಿಕಾರಿಗಳು ಉತ್ತರಿಸಿದ್ದಾರೆ. ರೈತರು ಸಾಲ ಪಾವತಿಸಿ ಖಾತಾ ನವೀಕರಣ ಮಾಡಿದ್ದನ್ನು ಮನವರಿಕೆ ಮಾಡಿಕೊಟ್ಟದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಕಾರ್ಯದಶಿರ್ ಎಸ್​.ಕೆ. ದೇಸಾಯಿ ಅವರ ಅಕ್ರಮ ಬಯಲಿಗೆ ಬಂದು ಅವರನ್ನು ಅಮಾನತ್ತು ಮಾಡಲಾಗಿತ್ತು. 70 ಲಕ್ಷ ರೂ. ಗಳನ್ನು ಎಸ್​.ಕೆ. ದೇಸಾಯಿ ಕೆಸಿಸಿ ಬ್ಯಾಂಕ್​ ಗೆ ಪಾವತಿಸಿದ್ದು, ಇನ್ನೂ 30 ಲಕ್ಷಕ್ಕೂ ಅಧಿಕ ಹಣ ಕೆಸಿಸಿ ಬ್ಯಾಂಕ್​ ಗೆ ಮರು ಪಾವತಿ ಆಗಬೇಕಿದ್ದು, ಈ 30 ಲಕ್ಷ ಪಾವತಿ ಆದ ನಂತರ ಬೆಳೆ ಸಾಲ ಮಂಜೂರು ಮಾಡುತ್ತೇವೆ ಎಂದು ಕೆಸಿಸಿ ಬ್ಯಾಂಕ್​ ಅಧಿಕಾರಿಗಳು ರೈತರಿಗೆ ಉತ್ತರಿಸಿದ್ದಾರೆ. ಪ್ರಕರಣದ ಮಾಹಿತಿ ಪಡೆಯಲು ಗದಗ ಹಾಗೂ ಧಾರವಾಡ ಕೆಸಿಸಿ ಬ್ಯಾಂಕ್​ ಅಧಿಕಾರಿಗಳನ್ನು ವಿಜಯವಾಣಿ ಸಂಪಕಿರ್ಸಿದರೂ ಸಮರ್ಪಕ ಉತ್ತರ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದರು.

ಬುಧವಾರ ಗಲಾಟೆ:
ಪ್ಯಾಕ್ಸಿನ ಕಳೆದ ಎರಡು ವರ್ಷದ ಲೆಕ್ಕ ಪರಿಶೋಧನೆ ನಡೆದಿಲ್ಲ ಮತ್ತು ಆಡಳಿತ ಮಂಡಳಿಯ ಸಾಮಾನ್ಯ ಸಭೆಯೂ ಜರುಗಿಲ್ಲ. ಈ ನಡುವೆ ಸೆ. 30 ರಂದು ಅವಿಭಿಜಿತ ಧಾರವಾಡ ಜಿಲ್ಲೆಯ ಕೆಸಿಸಿ ಬ್ಯಾಂಕಿದ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ಜರುಗಲಿದೆ. ಈ ಚುನಾವಣೆ ಹಿನ್ನೆಲೆ ಸೆ.27 ಕ್ಕೆ ಪ್ಯಾಕ್ಸಿನ ಆಡಳಿತ ಮಂಡಳಿಯು ಸಭೆ ಕರೆದಿದೆ. ಸಭೆಯಲ್ಲಿ ಹಲವು ವಿಷಯಗಳ ಕುರಿತು ಮತ್ತು ಎಸ್​.ಕೆ. ದೇಸಾಯಿ ಮಾಡಿದ ಅಕ್ರಮ ಕುರಿತು ಚಚಿರ್ಸಲು ಠರಾವು ಮಾಡಲಾಗಿತ್ತು. ಆದರೆ, ಒಂದು ವಾರದ ಮುಂಚೆ ಸರ್ವ ಸದಸ್ಯರಿಗೆ ನೋಟಿಸ್​ ನೀಡುವ ಬದಲಾಗಿದೆ ಸೆ.26ರ ರಾತ್ರಿ ನೋಟಿಸ್​ ನೀಡಿ ತರಾತುರಿಯಲ್ಲಿ ಸಭೆ ನಡೆಸಲು ಮಂಡಳಿ ಸದಸ್ಯರು ತೀರ್ಮಾನಿಸಿದ್ದರು. ಸಭೆ ಕರೆದಿರುವ ಸುದ್ದಿ ತಿಳಿದ ರೈತರು ಬುಧವಾರ ಪ್ಯಾಕ್ಸಿಗೆ ತೆರಳಿ ಗಲಾಟೆ ನಡೆಸಿದ್ದಾರೆ ಮತ್ತು ಎಸ್​.ಕೆ. ದೇಸಾಯಿ ಅವರನ್ನು ಸಭೆಗೆ ಕರೆತರಲು ತಿಳಿಸಿದ್ದಾರೆ. ಆದರೆ, ಎಸ್​.ಕೆ. ದೇಸಾಯಿ ಗ್ರಾಮದಿಂದ ನಾಪತ್ತೆ ಆಗಿದ್ದರು.

ಅನುಮಾನಗಳೇನು?
ಎಸ್​.ಕೆ. ದೇಸಾಯಿ ಹಿಂದೆ ಹಲವರ ಕೈವಾಡವಿದೆ ಎಂದು ಗ್ರಾಮದ ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ, ಕೆಲ ಸದಸ್ಯರ ಹಸ್ತಕ್ಷೇಪವಿಲ್ಲದೇ ಕೊಟ್ಯಂತರ ರೂ. ಅವ್ಯವಹಾರವನ್ನು ಒಬ್ಬ ವ್ಯಕ್ತಿ ಮಾಡಲು ಸಾಧ್ಯವಿಲ್ಲ. ಅಕ್ರಮ ಬಯಲಾಗುತ್ತಿದ್ದಂತೆ 71 ಲಕ್ಷ ಮರು ಪಾವತಿ ಆಗಿದ್ದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಒಂದು ವಾರ ಮುಂಚೆ ಸದಸ್ಯರಿಗೆ ನೋಟೀಸ್​ ನೀಡುವ ಬದಲಾಗಿದೆ ಒಂದೇ ದಿನದಲ್ಲಿ ಸಭೆ ಕರೆದಿದ್ದಾರೆ. ಸಭೆಯಲ್ಲಿ ಅಕ್ರಮ ಕುರಿತು ಚರ್ಚೆ ಆಗದಂತೆ ಕೆಲವರು ಎಚ್ಚರ ವಹಿಸಲು ತುರ್ತಾಗಿ ಸಭೆ ಕರೆದಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ಅಕ್ರಮ ನಡೆದರೂ ಆರೋಪಿತ ವಿರುದ್ಧ ಎೈಆರ್​ ದಾಖಲಿಸದೇ ಇರುವುದು ರೈತರಿಗೆ ಆರೋಪಗಳಿಗೆ ಪುಷ್ಠಿ ನೀಡುವಂತಿದೆ.

ಕೋಟ್​:
ಕೆಲ ರೈತರು ಸಾಲ ತಗೆದುಕೊಳ್ಳದಿದ್ದರೂ, ಹೊಲದ ಖಾತೆ ಮೇಲೆ ಸಾಲದ ಭೋಜ ಹಾಕಲಾಗಿದೆ. ಕೆಲವರ ಸಾಲ ಪಾವತಿಸಿ ಸಾಲದ ಖಾತೆ ನವೀಕರಿಸಿದರೂ ಪ್ರಸಕ್ತ ಸಾಲಿನ ಬೆಳೆ ಸಾಲ ಸಿಗುತ್ತಿಲ್ಲ. ಅಕ್ರಮ ಎಸಗಿದ ಎಸ್​.ಕೆ. ದೇಸಾಯಿ ಅವರು ನಾಪತ್ತೆ ಆಗಿದ್ದಾರೆ. ಪ್ರಕರಣ ಇತ್ಯರ್ಥ ಆಗುವ ವರೆಗೂ ರೈತರು ಸಾಲ ಪಡೆಯುವುದರಿಂದ ವಂಚಿತರಾಗುತ್ತಾರೆ. ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕು.
- ಗೊವಿಂದರೆಡ್ಡಿ ಕೊಣ್ಣುರು, ಸ್ಥಳಿಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net