ಕಾರಟಗಿ: ರಾಷ್ಟ್ರೀಯ ಬ್ಯಾಂಕುಗಳು ಕೃಷಿ, ಕೈಗಾರಿಕೆ, ಗುಡಿ ಕೈಗಾರಿಕೆಗಳಿಗೆ ನೀಡಿದ ಕೊಡುಗೆಗಿಂತ ಸಹಕಾರಿ ಸಂಘಗಳ ಕೊಡುಗೆ ಅಪಾರ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶೇಖರಗೌಡ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಸಹಕಾರಿ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ರಾಜ್ಯ ಸಹಕಾರಿ ಸಂಘ, ತಾಲೂಕು ಸೌಹಾರ್ದ ಸಹಕಾರಿ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘ, ತಾಲೂಕಿನ ಸಹಕಾರಿ ಸಂಘಗಳು, ಸೌಹಾರ್ದ ಸಹಕಾರಿಗಳು ಹಾಗೂ ಜಿಲ್ಲಾ ಸಹಕಾರ ಇಲಾಖೆ ಆಶ್ರಯದಲ್ಲಿ ಬುಧವಾರ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ಉತ್ತಮ ಸಮಾಜ ನಿರ್ಮಾಣ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಸಮಾರಂಭದ ಸಮಾರೋಪದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿ ಸಂಘಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಹೀಗಾಗಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ಪ್ರಾಮಾಣಿಕರಾಗಿರಬೇಕು. ಸದಸ್ಯರಿಗೆ ಸಕಾಲಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ನೆರವು ಒದಗಿಸಬೇಕು. ಈ ಮೂಲಕ ಬಡ ಜನರ ಅಭ್ಯೂದಯಕ್ಕೆ ಕಾರಣವಾಗಬೇಕು. ಅಂದಾಗ ಮಾತ್ರ ಸಹಕಾರ ಕ್ಷೇತ್ರ ಮತ್ತಷ್ಟು ಬಲಿಷ್ಟವಾಗಲು ಸಾಧ್ಯ ಎಂದರು.
ಮರುಳಸಿದ್ದಯ್ಯಸ್ವಾಮಿ ಹಿರೇಮಠ ಮಾತನಾಡಿ, ಧರ್ಮೋ ರಕ್ಷಿತ ರಕ್ಷಿತಹಃ ಎನ್ನುವಂತೆ ಯಾರು ಧರ್ಮವನ್ನು ರಕ್ಷಣೆ ಮಾಡುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ. ಅದೇ ರೀತಿ ಸಹಕಾರಿ ರಂಗದಲ್ಲಿ ಸಹಕಾರದ ಮಹತ್ವ ಅರಿತು ನಡೆಯಬೇಕು ಎಂದರು.
ಪಟ್ಟಣದ ಪುರಸಭೆ ಬಳಿ ಸಹಕಾರ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಹಕಾರಿ ರಂಗದ ಧುರೀಣರು, ವಿವಿಧ ಸಹಕಾರಿ ಸಂಘಗಳ ಪ್ರತಿನಿಧಿಗಳು, ನೌಕರರು, ಸಿಬ್ಬಂದಿ ಭಾಗವಹಿಸಿದ್ದರು. ಸೌಹಾರ್ದ ಸಹಕಾರಿ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ಅಮರಯ್ಯಸ್ವಾಮಿ ಸಾಲಿಮಠ, ಸಹಕಾರ ಧ್ವಜಾರೋಹಣ ನೆರವೇರಿಸಿದರು. ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣೇಗೌಡ ಕೊಂತನೂರು, ಸಹಕಾರಿ ಸಂಘಗಳ ಜಂಟಿ ನಿಬಂಧಕ ವಿಶ್ವನಾಥ್ ಮಲಕೋಡ್, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ದಸ್ತಗೀರ್ ಅಲಿ, ಉದ್ಯಮಿ ಕೆ.ನಾಗಪ್ಪ, ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಅಕ್ಷಯ್ ಕುಮಾರ್, ನಿರ್ದೇಶಕ ಎಂ.ರಾಜಶೇಖರ ಹೊಸಮನಿ, ಹೊಸಪೇಟೆ ವಿಕಾಸ ಸಹಕಾರಿ ಸೌಹಾರ್ದ ನಿಯಮಿತ ಅಧ್ಯಕ್ಷ ಚ.ವಿಶ್ವನಾಥ್ ಹಿರೇಮಠ ಇತರರಿದ್ದರು.