ಸಹಕಾರಿ ಕಾಯ್ದೆ ತಿದ್ದುಪಡಿಯಿಂದ ಸೌಲಭ್ಯಗಳು ಕಡಿತ

ಡಿ.ಎಚ್.ಪೂಜಾರ
ಡಿ.ಎಚ್.ಪೂಜಾರ
Published on

ಸಿಂಧನೂರು: ರಾಜ್ಯಗಳ ಸ್ವಾಯತ್ತ ಅಧಿಕಾರವನ್ನು ವಿಧ್ವಂಸಗೊಳಿಸುವ ಸಹಕಾರಿ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಬೇಕೆಂದು ಸಿಪಿಐ(ಎಂಎಲ್) ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ಕೇಂದ್ರ ಸರ್ಕಾರ ಲೋಕಸಭೆಯಲ್ಲಿ 1980 ಹಾಗೂ 1996ರ ಅರಣ್ಯ ( ಸಂರಕ್ಷಣೆಯ) ತಿದ್ದುಪಡಿ ಮಸೂದೆಯನ್ನು ಮಂಡಿಸಿ.

ಅದಾನಿ ಹಾಗೂ ಅಂಬಾನಿ ಕಂಪನಿಗಳಿಗೆ ಲಕ್ಷಾಂತರ ಹೆಕ್ಟೇರ್ ಅರಣ್ಯ ಭೂಮಿಯನ್ನು ಬಿಟ್ಟು ಕೊಡುವ ಕಾರ್ಯಕ್ಕೆ ಮುಂದಾಗಿದೆ. ಸಹಕಾರಿ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯಗಳ ಸ್ವಾಯತ್ತ ಅಧಿಕಾರವನ್ನು ಮೊಟಕುಗೊಳಿಸಿದೆ ಎಂದು ದೂರಿದರು.

ಕೇಂದ್ರ ಸರ್ಕಾರ ಸಹಕಾರಿ ಕಾಯ್ದೆಗೆ ತಿದ್ದುಪಡಿ ತಂದು ಸರ್ವಾಧಿಕಾರ ಪ್ರದರ್ಶಿಸಿದೆ. ಈಗಾಗಲೇ ಬ್ಯಾಂಕ್‌ಗಳನ್ನು ಸ್ವಾಧೀನಕ್ಕೆ ಪಡೆದುಕೊಂಡಿರುವ ವಿದೇಶಿ ಮತ್ತು ಸ್ವದೇಶಿ ಕಾರ್ಪೋರೇಟ್ ಕಂಪನಿಗಳು, ಇನ್ನು ಮುಂದೆ ದೇಶದ ಸಹಕಾರಿ ಕ್ಷೇತ್ರವನ್ನು ನುಂಗಿ ಹಾಕಲಿವೆ.

ಇದುವರೆಗೆ ರೈತರಿಗೆ ದೊರೆಯುತ್ತಿದ್ದ ಶೂನ್ಯ ಬಡ್ಡಿ ಸಾಲ ಮತ್ತು ಸಾಲ ಮನ್ನಾ ಸೇರಿ ಇತರ ರಿಯಾಯಿತಿಯ ಹಕ್ಕುಗಳು ತಿದ್ದುಪಡಿ ಕಾಯ್ದೆಯಿಂದ ನಾಶಗೊಳ್ಳಲಿವೆ.

ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ರಾಜ್ಯಗಳ ಪ್ರಜಾತಂತ್ರವಾದಿಗಳು, ವಿದ್ಯಾರ್ಥಿ ಯುವಜನರು ಸೇರಿ ಸಮಸ್ತ ದುಡಿಯುವ ಜನತೆ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ಹೋರಾಡಬೇಕಿದೆ ಎಂದು ಡಿ.ಎಚ್.ಪೂಜಾರ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net