ಕಾಲೇಜು ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಸಹಕಾರ ಅಗತ್ಯ

fmcc old students
Published on

ಮಡಿಕೇರಿ: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಸಭೆಯು ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಕಾಲೇಜಿನ ನ್ಯಾಕ್ ಕೊಠಡಿಯಲ್ಲಿ ಶನಿವಾರ ನಡೆಯಿತು.

ಸಭೆಯಲ್ಲಿ ಹಳೆ ವಿದ್ಯಾರ್ಥಿ ಸಂಘದಿಂದ ಕಾಲೇಜಿನಲ್ಲಿ ನಡೆಯಬೇಕಿರುವ ಅಭಿವೃದ್ಧಿಯ ಕುರಿತು ಚರ್ಚೆ ನಡೆಸಲಾಯಿತು. ಗೌರವ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರು ವಹಿಸುವಂತೆ ನಿರ್ಣಯ ಕೈಗೊಳ್ಳಲಾಯಿತು. ಜೊತೆಗೆ ಮುಂಬರುವ ಕಾಲೇಜು ಅಭಿವೃದ್ಧಿ ಕುರಿತು ಚರ್ಚಿಸಿದ್ದು ಆಡಳಿತ ಮಂಡಳಿ ಸದಸ್ಯರು ನಿರ್ಣಯಗಳಿಗೆ ಸಮ್ಮತಿಸಿದರು.

ಗೌರವ ಅಧ್ಯಕ್ಷರು ಹಾಗೂ ಕಾಲೇಜು ಪ್ರಾಂಶುಪಾಲ ಮೇ.ಪ್ರೊ.ರಾಘವ.ಬಿ. ಮಾತನಾಡಿ, ಕಾಲೇಜು ಅಭಿವೃದ್ಧಿಗೆ ಹಳೆ ವಿದ್ಯಾರ್ಥಿ ಸಂಘದ ಸಹಕಾರ ಅಗತ್ಯ. ಕಾಲೇಜಿನಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಈ ಬಗ್ಗೆ ಹಳೆ ವಿದ್ಯಾರ್ಥಿ ಸಂಘ ಗಮನ ಹರಿಸುವಂತೆ ಮನವಿ ಮಾಡಿದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಹೊಸ ಆಡಳಿತ ಮಂಡಳಿ ಬಂದ ನಂತರ ಈವರೆಗೆ ನೂರಕ್ಕೂ ಹೆಚ್ಚು ಹೊಸ ಸದಸ್ಯತ್ಯವನ್ನ ಮಾಡಲಾಗಿದೆ. ಮುಂದಿನ ಮಾಹಾ ಸಭೆಯ ಒಳಗಾಗಿ ಇನ್ನೂ ೫೦ ಹೊಸ ಸದಸ್ಯತ್ವವನ್ನು ಮಾಡಿ ಮುಂದಿನ ಮಾಹಾಸಭೆಗೆ ೧೫೦ಕ್ಕು ಹೆಚ್ಚು ಸದಸ್ಯರನ್ನು ಸೇರಿಸಲಾಗುವುದು ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿ ಸಂಘವು ಕಾಲೇಜಿನ ಅಭಿವೃದ್ಧಿಗೆ ಕೈಜೋಡಿಸಿದೆ. ಮುಂದಿನ ದಿನಗಳಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಫೋಟೋಗ್ರಫಿ ಸ್ಪರ್ಧೆಂ ಏರ್ಪಡಿಸಲಾಗುವುದು. ಅಕ್ಟೋಬರ್ ತಿಂಗಳಲ್ಲಿ ವಾರ್ಷಿಕ ಸಭೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ, ಕಾಲೇಜು ಉಪನ್ಯಾಸಕರಿಗೆ ಸನ್ಮಾನ, ಕಾಲೇಜಿನ ಹಳೆ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವುದಾಗಿ ತಿಳಿಸಿದ ಅವರು, ಹಳೆ ವಿದ್ಯಾರ್ಥಿ ಸಂಘದ ಸದಸ್ಯತ್ವ ಪಡೆದುಕೊಳ್ಳದವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು, ನಿರ್ದೇಶಕರುಗಳಾದ ಲೋಹಿತ್ ಮಾಗುಲು ಮನೆ, ಚೀಯಕಪೂವಂಡ ಸಚಿನ್ ಪೂವಯ್ಯ, ಐಚಂಡ ರಶ್ಮಿ ಮೇದಪ್ಪ, ಪಿ.ಕೆ.ಶೀತಲ್, ಕೋಚನ ದಿಶಾಂತ್, ಆದರ್ಶ್ ಅದ್ಕಲೇಗಾರ್, ಬಿ.ಜಿ.ಹರ್ಷಿತ್, ವತ್ಸಲ, ಖುರ್ಷಿದಾ ಭಾನು, ಬಿ.ಜೆ.ಚರಣ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net