ಸಿಡಿಮದ್ದು ಸ್ಫೋಟಕ್ಕೆ ಕಡಿವಾಣ ಹಾಕಲು ಸಹಕಾರ ಅಗತ್ಯ

02 HANUR 6
ಕೌದಳ್ಳಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಮಾತನಾಡಿದರು. ಉಮೇಶ್, ಡಾ. ಸಿದ್ದರಾಜು, ಚಿಕ್ಕರಾಜಶೆಟ್ಟಿ, ರಾಜಶೇಖರಮೂರ್ತಿ ಇತರರು ಇದ್ದರು.
Published on

ಹನೂರು: ಕಿಡಿಗೇಡಿಗಳು ಅಡಗಿಸಿಡುವ ಸಿಡಿಮದ್ದಿನ ಸ್ಫೋಟದಿಂದ ಜಾನುವಾರುಗಳು ಮೃತಪಡುತ್ತಿರುವುದಕ್ಕೆ ಕಡಿವಾಣ ಹಾಕಲು ಎಲ್ಲರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್ ಹೇಳಿದರು.

ತಾಲೂಕಿನ ಕೌದಳ್ಳಿ ಗ್ರಾಮದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಬುಧವಾರ ಸಿಡಿಮದ್ದು ಸ್ಫೋಟ ಕಡಿವಾಣ ಸಂಬಂಧ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದರು.

ಕೌದಳ್ಳಿ, ಶೆಟ್ಟಳ್ಳಿ ಸೇರಿದಂತೆ ಈ ಭಾಗದ ಇನ್ನಿತರ ಗ್ರಾಮಗಳಲ್ಲಿ ನಾಲ್ಕೈದು ತಿಂಗಳಿನಿಂದ ಕಿಡಿಗೇಡಿಗಳು ಅಡಗಿಸಿಡುವ ಸಿಡಿಮದ್ದು ಸ್ಫೋಟದಿಂದ ಆರೇಳು ಹಸುಗಳು ಮೃತಪಟ್ಟಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಈ ದುಷ್ಕೃತ್ಯದಿಂದ ರೈತರು ನಷ್ಟವನ್ನು ಅನುಭವಿಸುವಂತಾಗಿದ್ದು, ಭಯಭೀತರಾಗಿದ್ದಾರೆ. ಪ್ರಾಣಿಗಳನ್ನು ಕೊಲ್ಲುವುದು ಅಪರಾಧ. ಆದರೆ ಕೆಲ ಕಿಡಿಗೇಡಿಗಳು ವನ್ಯಜೀವಿಗಳನ್ನು ಬೇಟೆಯಾಡುವ ಉದ್ದೇಶದಿಂದಲೋ ಅಥವಾ ಜಾನುವಾರುಗಳನ್ನು ಕೊಲ್ಲುವ ಸಲುವಾಗಿಯೇ ಇಂಥ ಕೃತ್ಯ ನಡೆಸುತ್ತಿದ್ದಾರೆ ಎಂಬುದು ತಿಳಿಯಬೇಕಿದೆ. ಜತೆಗೆ ಕಡಿವಾಣ ಹಾಕಬೇಕು. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು ಎಂದು ಹೇಳಿದರು.

ಆದ್ದರಿಂದ ಎಲ್ಲರ ಸಹಕಾರ ಅಗತ್ಯ. ಇಂಥ ಕೃತ್ಯ ಎಸಗುವವರ ಸುಳಿವು ಸಿಕ್ಕಲ್ಲಿ ಅಧಿಕಾರಿಗಳಿಗೆ ಕೂಡಲೇ ಮಾಹಿತಿ ತಿಳಿಸಬೇಕು. ಈ ಬಗ್ಗೆ ಅಗತ್ಯ ಕ್ರಮವಹಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಇಂಥ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯ. ಹಾಗೆಯೇ ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉಮೇಶ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿದ್ದರಾಜು, ಇನ್‌ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ, ಆರ್‌ಎಫ್‌ಒ ರಾಜಶೇಖರ ಮೂರ್ತಿ, ಗ್ರಾಮ ಆಡಳಿತ ಅಧಿಕಾರಿ ಕಾರ್ತಿಕ್, ಮುಖಂಡರಾದ ಚಂಗಡಿ ಕರಿಯಪ್ಪ, ಮುತ್ತಯ್ಯ, ಪ್ರವೀಣ್, ಶಾಂತಕುಮಾರ್, ಶಿವರಾಮು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net