

ಅರಕಲಗೂಡು: ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಗ್ರಾಮಸ್ಥರು ಹಾಗೂ ಹಳೆಯ ವಿದ್ಯಾರ್ಥಿಗಳು ಕೈಜೋಡಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಲು ಉತ್ತಮ ಸಹಕಾರ ನೀಡಬೇಕು ಎಂದು ಶಾಸಕ ಎ. ಮಂಜು ತಿಳಿಸಿದರು.
ತಾಲೂಕಿನ ಮದಲಾಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆ ಕಾಲದಲ್ಲಿ ಇಲ್ಲಿ ಶಾಲೆ ಆರಂಭಿಸಿದ ಪುಣ್ಯಾತ್ಮರ ಪುಣ್ಯ ಕಾಯಕದಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಗಳಿಸಿ ಇಂದು ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಈಗ ನಾವು ಶಾಲೆ ಆರಂಭಿಸಿದರೆ ಹಳ್ಳಿಗಳಲ್ಲಿ ಮಕ್ಕಳೇ ಬಾರದ ಸ್ಥಿತಿ ಇದೆ. ಶಾಲೆಯಲ್ಲಿ ಕಲಿತ ನಾವು ನೀವು ಇರಲ್ಲ, ಆದರೆ ನಾವು ಕಲಿತ ಶಾಲೆ ಶಾಶ್ವತವಾಗಿರುತ್ತದೆ. ಇದಕ್ಕಾಗಿ ಅವಕಾಶ ಸಿಕ್ಕಾಗ ನಾವು ಕಲಿತ ಶಾಲೆಯ ಉನ್ನತಿಗೆ ಶ್ರಮಿಸಬೇಕು. ವಜ್ರ ಮಹೋತ್ಸವ ಸ್ಮರಣಾರ್ಥ ಹಳೆಯ ವಿದ್ಯಾರ್ಥಿಗಳು ಕೊಡುಗೆ ನೀಡಬೇಕು, ನನ್ನ ಶಾಸಕರ ನಿಧಿಯಿಂದ ಶಾಲೆಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಪ್ರತಿ ಹಳ್ಳಿಗಳಲ್ಲಿ ಮಕ್ಕಳು ದುಬಾರಿ ಶುಲ್ಕ ತೆತ್ತು ಪಟ್ಟಣ ಪ್ರದೇಶದ ಖಾಸಗಿ ಕಾನ್ವೆಂಟ್‌ಗಳಿಗೆ ತೆರಳುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ನಾನು ನನ್ನ ಪತ್ನಿ ತಾಲೂಕಿನಲ್ಲಿ 13 ಮಕ್ಕಳ ಮನೆ ತೆರೆದು ಕಾನ್ವೆಂಟ್‌ಗಳಿಗಿಂತ ಮಿಗಿಲಾದ ಸೌಲಭ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ಒದಗಿಸಲು ಒತ್ತು ನೀಡಲಾಗಿದೆ. ಪ್ರತಿ ಪಂಚಾಯಿತಿಗೆ ಒಂದರಂತೆ ಮಕ್ಕಳ ಮನೆ ಆರಂಭಿಸುವ ಉದ್ದೇಶವಿದೆ. ಈ ಕುರಿತು ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪ ಮಾಡಿದ್ದು ಇಡೀ ರಾಜ್ಯಕ್ಕೆ ಮಾದರಿ ಆಗಲಿದೆ. ಪಾಲಕರು ಖಾಸಗಿ ಕಾನ್ವೆಂಟ್‌ಗಳ ವ್ಯಾಮೋಹ ತೊರೆದು ಮಕ್ಕಳ ಮನೆಗೆ ತಮ್ಮ ಮಕ್ಕಳನ್ನು ಕಳುಹಿಸಬೇಕು ಎಂದು ಕಿವಿಮಾತು ಹೇಳಿದರು.
ಅಧಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಸಿಂಗನಕುಪ್ಪೆ ಮಾತನಾಡಿ, ಸರ್ಕಾರಿ ಶಾಲೆಗಳ ಕುರಿತು ಮೊದಲು ನಾವು ಕೀಳರಿಮೆಯಿಂದ ಕಾಣುವುದನ್ನು ನಿಲ್ಲಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕಲಿತವರು ಹಲವಾರು ಉನ್ನತ ಹುದ್ದೆಯಲ್ಲಿದ್ದು ದೇಶಕ್ಕೆ ಮಹಾನ್ ಕೊಡುಗೆ ನೀಡಿದ್ದಾರೆ ಎಂದರು.
ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಾನು ಎರಡು ವರ್ಷಗಳ ಹಿಂದೆ ಅಬ್ಬೂರು ಮಾಚಗೌಡನಹಳ್ಳಿ ಶಾಲೆಗೆ ಐದು ಲಕ್ಷ ರೂ ವ್ಯಯಿಸಿದ್ದೆ. ಆ ಸಂದರ್ಭದಲ್ಲಿ ಸರ್ಕಾರಿ ಶಾಲೆ ದತ್ತು ಪಡೆದು ಅಭಿವೃದ್ಧಿ ಪಡಿಸುವುದಾಗಿ ಬಿಇಒ ಅವರ ಗಮನಕ್ಕೆ ತಂದಿದ್ದೆ. ಆದರೆ ಬಿಇಒ ಮನಸ್ಸು ಮಾಡಲಿಲ್ಲ. ಈಗಲೂ ಅಧಿಕಾರಿಗಳು ಅವಕಾಶ ಕಲ್ಪಿಸಿದರೆ ಸರ್ಕಾರಿ ಶಾಲೆ ದತ್ತು ಪಡೆದು ಮಾದರಿಯಾಗಿ ಅಭಿವೃದ್ಧಿ ಪಡಿಸುತ್ತೇನೆ. ಮದಲಾಪುರ ಶಾಲೆಯಂತೆ ಎಲ್ಲ ಶಾಲೆಗಳಲ್ಲಿ ಅದ್ಭುತವಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸಿದರೆ ಹೆಚ್ಚಿನ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ಹಾಸನ ಆಕಾಶವಾಣಿ ಕೇಂದ್ರದ ಪ್ರಸಾರ ನಿರ್ವಾಹಕ ವಿಜಯ್ ಅಂಗಡಿ, ಕಾರ್ಯನಿರ್ವಾಹಕ ಮಧುಸೂದನ್ ಮಾತನಾಡಿದರು. ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ, ಕಾರ್ಯದರ್ಶಿ ಎಂ.ಆರ್. ಮಂಜುನಾಥ್, ಗ್ರಾಪಂ ಉಪಾಧ್ಯಕ್ಷೆ ಸುಮಿತ್ರಮ್ಮ, ಸಿಆರ್‌ಪಿ ಮಲ್ಲಿಕಾರ್ಜುನ, ಬಿಆರ್‌ಪಿ ಶಂಕರ್, ಮುಖ್ಯ ಶಿಕ್ಷಕರಾದ ಜಯಕೇಶವ, ಶಿಕ್ಷಕರಾದ ಲೋಕೇಶ್, ಪದ್ಮ, ಮಮತಾ, ಮುಖಂಡರಾದ ಪುಟ್ಟರಾಜೇಗೌಡ, ರಂಗೇಗೌಡ, ಸುರೇಶ್, ಬಸವರಾಜು, ಸಂತೋಷ್, ವಿನಯ್, ಕಾಂತರಾಜು, ಚಂದ್ರಶೇಖರ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ಸದಸ್ಯರು, ಗ್ರಾಮಸ್ಥರು ಇದ್ದರು. ವಿವಿಧ ಗ್ರಾಮೀಣ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗುರುಗಳಿಗೆ ನೆನಪಿನ ಕಾಣಿಕೆ ನೀಡಿ ಗುರು ವಂದನೆ ಸಲ್ಲಿಸಲಾಯಿತು.