

ಕುಂದಗೋಳ: ಮಿಸಲ್ಸ್ (ದಡಾರ) ಮತ್ತು ರುಬೆಲ್ಲಾ ನಿರ್ಮೂಲನೆ, ಇಂದ್ರ ಧನುಷ್ ಅಭಿಯಾನ, ಸಕ್ರಿಯ ಕ್ಷಯ ರೋಗ ಪತ್ತೆ ಹಚ್ಚುವ ಆಂದೋಲನ ಕುರಿತು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಸ್.ಎಸ್. ಪರಮಾನಂದ ಮಾತನಾಡಿ. 2025ರ ಒಳಗಾಗಿ ಕ್ಷಯ ಮುಕ್ತ ರಾಷ್ಟ್ರ ನಿರ್ಮಾಣದ ಗುರಿ ಮುಟ್ಟಲು ಎಲ್ಲ ಇಲಾಖೆ ಅಧಿಕಾರಿಗಳ ಸಹಕಾರ ಅಗತ್ಯ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ವಿದ್ಯಾವತಿ ಪಾಟೀಲ ಮಾತನಾಡಿ. ತಾಲೂಕಿನಾದ್ಯಂತ ಜುಲೈ 11ರಿಂದ ವಿಶ್ವ ಜನಸಂಖ್ಯೆ ದಿನ ಆಚರಿಸಲಾಗುತ್ತಿದ್ದು, 24ರವರೆಗೆ ಜರುಗಲಿದೆ.
ಜುಲೈ 17ರಿಂದ ಸಕ್ರಿಯ ಕ್ಷಯ ರೋಗ ಮತ್ತೆ ಹಚ್ಚುವ ಆಂದೋಲನ ನಡೆಯುತ್ತಿದ್ದು ಆಗಸ್ಟ್ 2ರವರೆಗೆ ಜರುಗಲಿದೆ. ಅಲ್ಲದೆ, ಆಗಸ್ಟ್ 7ರಿಂದ ಅಕ್ಟೋಬರ್ 14ರವರೆಗೆ ಮಿಷನ್ ಇಂದ್ರ ಧನುಷ್ ಅಭಿಯಾನ ಜರುಗಲಿದೆ ಎಂದು ವಿವರಿಸಿದರು.
ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಎಸ್.ಎಂ. ಹೊನಕೇರಿ ಮಾತನಾಡಿದರು. ಮಹೇಶ ಕುರಿ, ಎನ್.ಕೆ. ಡೊಂಬರ, ಅನ್ನಪೂರ್ಣಾ ಸಂಗಳದ, ವೀನಾಕ್ಷಿ ಗುಡಗಿ, ಎಫ್.ಎಫ್. ರಶ್ಮಿ, ಹಾಗೂ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧಿಕಾರಿಗಳು ಇದ್ದರು.