ಸಂಘಟನೆಗಳ ಬೆಳವಣಿಗೆಗೆ ಕೌಟುಂಬಿಕ ಸಹಕಾರ ಅಗತ್ಯ

Oplus_2097152
ವಿವಿಧ ಕ್ಷೇತ್ರದ ಸಾಧನೆದ ಕೆಎಂಎ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಹಂಸ, ಕರ್ತೊರೆರ ಮುಸ್ತಫ, ಚಿಮ್ಮಿಚ್ಚಿರ ಕೆ.ಇಬ್ರಾಹಿಂ, ಪೊಯಕೆರ ಎಸ್.ಮೊಹಮ್ಮದ್ ರಫೀಕ್, ಮಂಡೇಂಡ ಎ.ಮೊಯ್ದು, ಪುದಿಯಾಣೆರ ಎಂ.ಹನೀಫ್, ಕುಪ್ಪೋಡಂಡ ಎ.ಅಬ್ದುಲ್ ರಶೀದ್ ಇದ್ದರು.
Published on

ವಿರಾಜಪೇಟೆ: ಯಾವುದೇ ಸಮುದಾಯಗಳು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು. ಈ ಸಂಘಟನೆಗಳು ಹೆಚ್ಚು ಕ್ರಿಯಾಶೀಲತೆಯಿಂದ ಮುನ್ನಡೆಯಬೇಕಾದರೆ ಅದರ ಪದಾಧಿಕಾರಿಗಳು ಮತ್ತು ಸದಸ್ಯರ ಕೌಟುಂಬಿಕ ಸಹಕಾರ ಮುಖ್ಯ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್(ಕೆಎಂಎ) ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿ ಹಾಜಿ ಅಭಿಪ್ರಾಯಪಟ್ಟರು.

ಕೊಡವ ಮುಸ್ಲಿಂ ಅಸೋಸಿಯೇಷನ್ ಕಾರ್ಯಕಾರಿ ಸಮಿತಿ ವತಿಯಿಂದ ಕದನೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೌಟುಂಬಿಕ ಸಂತೋಷಕೂಟ ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆ ಸಮಾಜದ ಶಕ್ತಿಯಾಗಿ ರೂಪುಗೊಳ್ಳಲು ಪದಾಧಿಕಾರಿಗಳ ನಿಷ್ಠೆ ಮತ್ತು ಪ್ರಾಮಾಣಿಕತೆ ಪ್ರಮುಖ ಪಾತ್ರ ವಹಿಸುತ್ತದೆ. ಯಾವುದೇ ಸಂಘಟನೆಗಳಲ್ಲಿ ಪದಾಧಿಕಾರಿಗಳು ಅವರನ್ನು ಪೂರ್ಣವಾಗಿ ತೊಡಗಿಸಿಕೊಳ್ಳಬೇಕಾದರೆ ಅವರ ಕುಟುಂಬ ಸದಸ್ಯರ ಸಹಕಾರವೂ ಮುಖ್ಯ. ಆಡಳಿತ ಮಂಡಳಿ ಪದಾಧಿಕಾರಿಗಳು ಒಗ್ಗಟ್ಟಿನಿಂದ ಇದ್ದಲ್ಲಿ ಸಂಘಟನೆಗಳ ಅಭಿವೃದ್ಧಿ ಸಾಧ್ಯ ಎಂದರು.

ಸಮುದಾಯ ಸೇವೆ ಮುಂದುವರಿಸಲು ಪದಾಧಿಕಾರಿಗಳ ಬದ್ಧತೆ ಅತ್ಯಗತ್ಯ. ಇದರಿಂದ ಸಂಸ್ಥೆಯ ಬೆಳವಣಿಗೆಯೂ ಸಾಧ್ಯ. ಆಸಕ್ತಿ, ಶ್ರಮದಿಂದ ಸಮುದಾಯದ ಪ್ರತಿಯೊಬ್ಬರನ್ನು ಒಗ್ಗೂಡಿಸಿ ಪ್ರಾತಿನಿಧಿಕ ಸಂಘಟನೆಯನ್ನು ಸದೃಢಗೊಳಿಸುವ ಮಹತ್ತರವಾದ ಜವಾಬ್ದಾರಿಯನ್ನು ಪದಾಧಿಕಾರಿಗಳು ವಹಿಸಿಕೊಳ್ಳಬೇಕು. ಸಮುದಾಯದ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿ ಅವರನ್ನು ಸಾಮಾಜಿಕವಾಗಿ ಮೇಲೆತ್ತುವುದು ಪ್ರತಿಯೊಬ್ಬರ ಕರ್ತವ್ಯ ಎಂದು ತಿಳಿಸಿದರು.

ಕೆಎಂಎ ಹಿರಿಯ ಉಪಾಧ್ಯಕ್ಷ ಡಾ.ಜೋಯಿಪೆರ ಎ.ಕುಂಜ್ಹಬ್ದುಲ್ಲಾ ಮಾತನಾಡಿದರು. ಕೋಶಾಧಿಕಾರಿ ಹರಿಶ್ಚಂದ್ರ ಎ.ಹಂಸ, ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ.ಇಸ್ಮಾಯಿಲ್, ನಿರ್ದೇಶಕರಾದ ಕೋಳುಮಂಡ ರಫೀಕ್, ಕುವೇಂಡ ವೈ.ಆಲಿ, ಪುಡಿಯಂಡ ಇ. ಶಾದುಲಿ, ಚಿಮ್ಮಿಚ್ಚಿರ ಕೆ.ಇಬ್ರಾಹಿಂ ಹಾಜಿ ಅವರನ್ನು ಗೌರವಿಸಲಾಯಿತು.

ಜಂಟಿ ಕಾರ್ಯದರ್ಶಿ ಕರ್ತೊರೆರ ಮುಸ್ತಫ, ಪೊಯಕೆರ ಎಸ್.ಮೊಹಮ್ಮದ್ ರಫೀಕ್, ಮಂಡೇಂಡ ಎ.ಮೊಯ್ದು, ಪುದಿಯಾಣೆರ ಎಂ.ಹನೀಫ್, ಕುಪ್ಪೋಡಂಡ ಎ.ಅಬ್ದುಲ್ ರಶೀದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net