

ಶಿರಸಿ: ಜಿಲ್ಲೆಯಲ್ಲಿ 120 ಕಡೆ ರಾಮಪತ್ರೆ ಜಡ್ಡಿಗಳಿದ್ದು, ಅವುಗಳ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಹೇಳಿದರು.
ನಗರದಲ್ಲಿ ಮನುವಿಕಾಸ ಸಂಸ್ಥೆ ಗುರುವಾರ ಆಯೋಜಿಸಿದ್ದ ನದಿ ಜಲಾನಯನ ಪ್ರದೇಶಗಳ ಮುಖ್ಯಸ್ಥರಿಗೆ ಸವಾಲುಗಳ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತರ ಕನ್ನಡದಲ್ಲಿ ಮಳೆ ಕೊರತೆ ಇರದಿದ್ದರೂ ಜನವರಿ ತಿಂಗಳ ಬಳಿಕ ನದಿಗಳು ಬರಿದಾಗುತ್ತವೆ. ನೀರಿನ ಕೊರತೆ ಉಂಟಾಗುತ್ತಿದೆ. ಈ ವರ್ಷ ಮಳೆ ಅಸಮಪರ್ಕವಾಗಿದ್ದು, ಮಳೆಯಾದ ದಿನಗಳು ಕಡಿಮೆ ಇವೆ. ಮುಂದೆಯೂ ಇದೇ ವಾತಾವರಣ ಮರುಕಳಿಸುವ ಸಾಧ್ಯತೆ ಇದೆ. ಜಲ ಜಾಗೃತಿ, ಅರಣ್ಯ ಸಂರಕ್ಷಣೆಯ ಜಾಗೃತಿ ಪ್ರತಿಯೊಬ್ಬರಿಗೂ ಅಗತ್ಯ ಎಂದರು.
ಪರಿಸರ ತಜ್ಞ ಪಾಂಡುರಂಗ ಹೆಗಡೆ ಮಾತನಾಡಿ, ಅಘನಾಶಿನಿ ಮತ್ತು ಬೇಡ್ತಿ ಇದುವರೆಗೂ ಯಾರದ್ದೇ ಹಂಗಿಲ್ಲದೆ ಮುಕ್ತವಾಗಿ ಹರಿಯುತ್ತಿದೆ. ಆದರೆ, ಬೆಂಗಳೂರಿನಲ್ಲಿ ಇಲ್ಲಿಯ ಸ್ಥಿತಿ ಗೊತ್ತಿಲ್ಲದ ಕೆಲವರು ನದಿ ತಿರುವು ಯೋಜನೆ ಹಾಕಿಕೊಳ್ಳುವುದು ದುರಂತ. ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ಆದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಅರಿಯುತ್ತಿಲ್ಲ. 40 ವರ್ಷದ ಹಿಂದೆಯೇ ಇಲ್ಲಿಯ ನೈಸರ್ಗಿಕ ಅರಣ್ಯಗಳು ಬರಿದಾಗಿ ಪ್ಲಾಂಟೇಶನ್ ತಲೆ ಎತ್ತಿವೆ. ಇನ್ನೊಂದೆಡೆ ಕಾಳಿ ನದಿ ಕಥೆಯೂ ಇದೆ ಆಗಿದೆ. 183 ಕಿಮೀ ಹರಿವಿದ್ದರೂ ಡ್ಯಾಮ್ ಕಾರಣದಿಂದಾಗಿ ಕೇವಲ 9 ಕಿಮೀ ಮಾತ್ರ ಕಾಳಿ ನೈಸರ್ಗಿಕವಾಗಿ ಹರಿಯುತ್ತಿದೆ. ನದಿಯನ್ನು ಅತಿಯಾಗಿ ಉಪಯೋಗಿಸಿ ನಮಗೆ ಬೇಕಾದಂತೆ ಪ್ರಯೋಜನ ಪಡೆದಿದ್ದೇವೆ ಎಂದರು.
ಮನುವಿಕಾಸ ಸಂಸ್ಥೆಯ ಗಣಪತಿ ಭಟ್ ಮಾತನಾಡಿ, ಅಘನಾಶಿನಿ, ಬೇಡ್ತಿ, ವರದಾ ನದಿ ಪ್ರದೇಶದಲ್ಲಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ. ವರದಾ ನದಿ ಒಮ್ಮೆ ಸಹಾಯ ಮಾಡಿದರೆ ಇನ್ನೊಂದು ಬಾರಿ ಹಾನಿಯನ್ನೂ ಮಾಡುತ್ತದೆ. ಅದೇ ಸ್ಥಿತಿ ಬೇಡ್ತಿಗೆ ಕಲಘಟಗಿ ತಾಲೂಕಿನಲ್ಲಿಯೂ ಇದೆ. ಈ ಪ್ರದೇಶದ ಹಳ್ಳ ಕೆರೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು.
ಪರಿಸರ ತಜ್ಞ ಎಂ.ಡಿ. ಸುಭಾಶಚಂದ್ರನ್, ಶಿವಾನಂದ ಕಳವೆ, ಬದನಗೋಡ ಗ್ರಾಪಂ ಅಧ್ಯಕ್ಷ ನಟರಾಜ ಹೊಸೂರು, ಪ್ರಕಾಶ ಮೇಸ್ತ, ವಿಶ್ವನಾಥ ಹಾದಿಮನಿ, ಇತರರಿದ್ದರು.