ಸರ್ಕಾರಿ ಶಾಲೆ ಅಭಿವೃದ್ಧಿಗೆ ಸಹಕಾರ ಅಗತ್ಯ

Cooperation is necessary for government school development
ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯ ನವೀಕೃತ ಕಟ್ಟಡ ಲೋಕಾರ್ಪಣೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಮುರಗೇಂದ್ರ ಶಿವಾಚಾರ್ಯರು, ನಾಗುಗೌಡ ಪಾಟೀಲ, ಗಣಪತಿ ಬಾಣಿಕೋಲ ಇತರರಿದ್ದರು.
Published on

ಇಂಡಿ : ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸ್ಥಳೀಯ ಮತ್ತು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ತಾಲೂಕಿನ ಅಥರ್ಗಾ ಗ್ರಾಮದ ಸರ್ಕಾರಿ ಗಂಡು ಮಕ್ಕಳ ಶಾಲೆಯಲ್ಲಿ ನವೀಕೃತ ಕಟ್ಟಡ ಲೋಕಾರ್ಪಣೆ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸದ ರಮೇಶ ಜಿಗಜಿಣಗಿ ಅವರು ಕಲಿತ ಶಾಲೆಗೆ ಒಂದು ಕೋಟಿ ರೂ. ಅನುದಾನ, ಶಾಸಕ ಯಶವಂತರಾಯಗೌಡ ಪಾಟೀಲ, ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮದ ಶಿಕ್ಷಣ ಪ್ರೇಮಿಗಳು ಹಳೆಯ ಶಾಲೆಗೆ ಹೊಸ ರೂಪ ಕೊಟ್ಟಿರುವುದು ಶ್ಲಾಘನೀಯ ಎಂದರು.

ಸಿದ್ಧೇಶ್ವರ ಶ್ರೀಗಳು ಈ ಭಾಗ ನೀರಾವರಿ ಆಗಬೇಕು ಎಂಬ ಕನಸು ಕಂಡಿದ್ದರು. ಕಳೆದ ಬಾರಿ ನೀರಾವರಿ ಸಚಿವನಿದ್ದಾಗ ಇದಕ್ಕೆ ಪ್ರಯತ್ನ ಮಾಡಿದ್ದೇನೆ.

ಈ ಬಾರಿಯೂ ಜಿಲ್ಲೆಯ ಎಲ್ಲ ಭಾಗಗಳಿಗೆ ಮತ್ತು ಇಂಡಿ ತಾಲೂಕಿನ ಕೊನೆಯ ಭಾಗದವರೆಗೆ ನೀರು ಹರಿಸಲು ಪ್ರಯತ್ನ ಮಾಡುತ್ತೇನೆ ಎಂದರು.

ಗ್ರಾಪಂ ಅಧ್ಯಕ್ಷ ನಾಗುಗೌಡ ಪಾಟೀಲ ಮಾತನಾಡಿ, ಸಂಸದ ಜಿಗಜಿಣಗಿಯವರ ಮತ್ತು ಶಾಸಕರ, ಪರಿಶ್ರಮ ಮತ್ತು ವಿವಿಧ ಇಲಾಖೆ ಅನುದಾನದಿಂದ 1.50 ಕೋಟಿ ರೂ. ವೆಚ್ಚದಲ್ಲಿ ಹಳೆಯ ಶಾಲೆಯನ್ನು ನವೀಕರಿಸಲಾಗಿದೆ.

ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ನೀಡಬೇಕು ಎಂದರು. ಸಾನ್ನಿಧ್ಯ ವಹಿಸಿದ್ದ ಅಥರ್ಗಾ ವಿರಕ್ತಿಮಠದ ಮುರಗೇಂದ್ರ ಶಿವಾಚಾರ್ಯರು ಮಾತನಾಡಿ, ನಾನೂ ಈ ಶಾಲೆಯಲ್ಲಿ ಕಲಿತಿದ್ದು, ಈಗ ಶಾಲೆ ನವೀಕರಣಗೊಳಿಸಲಾಗಿದೆ.

ಅಥರ್ಗಾ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಶಿಕ್ಷಣದ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು.

ಗಣಪತಿ ಬಾಣಿಕೋಲ, ರಮೇಶ ಗೊಟ್ಯಾಳ, ಅಂಬು ಮೇತ್ರಿ ಮಾತನಾಡಿದರು. ಜಿಪಂ ಸಿಇಒ ರಿಷಿ ಆನಂದ, ಕೆಆರ್‌ಐಡಿಎಲ್ ಎಇಇ ಆನಂದ ಸ್ವಾಮಿ, ಎಚ್.ಎಸ್. ನಾಡಗೌಡ, ದಯಾಸಾಗರ ಪಾಟೀಲ, ಜಿಪಂ ಉಪಾಧ್ಯಕ್ಷ ಸುಶೀಲಾಬಾಯಿ ರಾಠೋಡ, ಅಶೋಕಗೌಡ ಪಾಟೀಲ, ಎಸ್‌ಡಿಎಂಸಿ ಅಧ್ಯಕ್ಷ ಬಸಲಿಂಗಪ್ಪ ಪೂಜಾರಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net