ಸಮುದಾಯದ ಅಭಿವೃದ್ಧಿಗೆ ಸಹಕಾರ ಅಗತ್ಯ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ವಿರೂಪಾಕ್ಷ ಶಾಸಿ ಅಭಿಮತ, ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

14-Manjunath-HSK-01 A
Published on

ಹೊಸಕೋಟೆ: ವೀರಶೈವ-ಲಿಂಗಾಯತ ಎರಡು ಒಂದೇ ಆಗಿದ್ದು, ಉಳಿದ ಎಲ್ಲ ಒಳ ಪಂಗಡಗಳನ್ನು ಸೇರಿಸಿಕೊಂಡು ಒಂದು ಶಕ್ತಿಯುತ ಸಮುದಾಯವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ವಿರೂಪಾಕ್ಷ ಶಾಸ್ತ್ರಿ ಹೇಳಿದರು.

ನಗರದ ಎಚ್‌ಜೆಎಸ್‌ಎಸ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

1904 ರಲ್ಲಿ ವೀರಶೈವ ಲಿಂಗಾಯತ ಎರಡಲ್ಲ ಒಂದೇ ಎಂಬುವುದಾಗಿ ಹಾನಗಲ್‌ನ ಶ್ರೀಕುಮಾರಸ್ವಾಮಿಗಳು ತಿಳಿಸಿ, ಒಳಪಂಗಡಗಳನ್ನು ಒಟ್ಟಿಗೆ ಸೇರಿಸುವ ಪ್ರಕ್ರಿಯೆ ಶುರು ಮಾಡಲು ಮಹಾಸಭಾ ಸ್ಥಾಪನೆ ಮಾಡಿದರು. ಜಿಲ್ಲೆಯಾದ್ಯಂತ ಸಮುದಾಯವನ್ನು ಸಂಘಟಿಸಲು ನೂತನ ಪದಾಧಿಕಾರಿಗಳ ನೇಮಕ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಸದಸ್ಯತ್ವ ಅಭಿಯಾನ ಶುರುವಾಗಲಿದೆ ಎಂದರು.

ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ದೇವಲಾಪುರ ಸುವರ್ಣಾ ಮಾತನಾಡಿ, ಸಮುದಾಯ ಸಂಘಟನೆಯಿಂದ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಅಭಿವೃದ್ಧಿ ಸಾಧ್ಯ. ಹೀಗಾಗಿ ತಾಲೂಕಿನಲ್ಲಿ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯ ಉಪಾಧ್ಯಕ್ಷ ಎನ್.ಬಿ.ನಂಜೇಗೌಡ, ಸೂಲಿಬೆಲೆ ಹೋಬಳಿ ಅಧ್ಯಕ್ಷ ಎಂ.ಆರ್.ಉಮೇಶ್, ನಗರಸಭೆ ಸದಸ್ಯ ಸಿ.ಪಿ.ನವೀನ್, ತಾಲೂಕು ಆಗಮಿಕ ಆರ್ಚಕರ ಸಂಘದ ಅಧ್ಯಕ್ಷ ನಟರಾಜ್ ಶಾಸ್ತ್ರಿ, ಬಿಜೆಪಿ ಯುವ ಮೋರ್ಚಾ ನಗರ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಸಮುದಾಯದ ಮುಖಂಡರಾದ ಜೆ.ಆರ್.ಡಿ ಪ್ರಕಾಶ್, ದೇವಲಾಪುರ ಶಶಿ ಕುಮಾರ್, ಓಬಳಾಪುರ ಮಂಜುನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net