ಶೈಕ್ಷಣಿಕ ಪ್ರಗತಿಗೆ ಸಹಕಾರ ಅಗತ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ಅಭಿಮತ ಬೆಂಗಳೂರು ಉದ್ಯೋಗ್ ಸಂಸ್ಥೆಯಿಂದ ಟ್ಯಾಬ್ ವಿತರಣೆ

06 Nela Ph 02 Tab Vitharane
Published on

ನೆಲಮಂಗಲ: ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡುತ್ತಿರುವ ರೋಟರಿ ಸಂಸ್ಥೆ ಕಾರ್ಯ ಪ್ರಶಂಸನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಸೋಲದೇವನಹಳ್ಳಿಯ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ ರೋಟರಿ ಬೆಂಗಳೂರು ಉದ್ಯೋಗ್ ಸಂಸ್ಥೆಯಿಂದ ಆಯೋಜಿಸಿದ್ದ ಮಕ್ಕಳಿಗೆ ಉಚಿತವಾಗಿ ಟ್ಯಾಬ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರೊನಾ ಹಾವಳಿಯಿಂದಾಗಿ 10 ತಿಂಗಳಿಂದ ಶಾಲೆ ಮುಚ್ಚಿದ್ದು, ಜ.1 ರಿಂದ ಶಾಲೆ ಆರಂಭವಾಗಿವೆ. ಸರ್ಕಾರದಿಂದ ಆನ್‌ಲೈನ್ ತರಗತಿ ನಡೆಸುತ್ತಿದ್ದು, ಕೆಲ ಮಕ್ಕಳು ಮೊಬೈಲ್ ಇಲ್ಲದಿರುವುದರಿಂದ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಿರಲಿಲ್ಲ. ಇದನ್ನು ಮನಗಂಡು ರೋಟರಿ ಸಂಸ್ಥೆ ಜ್ಞಾನದೀವಿಗೆ ಯೋಜನೆಯಡಿ 10ನೇ ತರಗತಿ ಮಕ್ಕಳ ಅನುಕೂಲಕ್ಕಾಗಿ ಉಚಿತವಾಗಿ ಟ್ಯಾಬ್ ವಿತರಣೆ ಮಾಡಿದೆ ಎಂದರು.

ತಾಲೂಕಿನಾದ್ಯಂತ 11 ಸರ್ಕಾರಿ ಶಾಲೆಗಳ ಪೈಕಿ 7 ಶಾಲೆಗಳು 100 ಫಲಿತಾಂಶ ಪಡೆದುಕೊಂಡಿದ್ದು, ಆ ಶಾಲೆಗಳ ಪೈಕಿ ಸೋಲದೇವನಹಳ್ಳಿ ಶಾಲೆ ಒಂದಾಗಿದೆ. ಎಸ್ಸೆಸ್ಸೆಲ್ಸಿಯಲ್ಲಿ ಗ್ರಾಮಾಂತರ ಜಿಲ್ಲೆಗೆ ನೆಲಮಂಗಲ ತಾಲೂಕು 2ನೇ ಸ್ಥಾನ ಪಡೆದುಕೊಂಡಿದ್ದು, ಈ ಬಾರಿ ಪ್ರಥಮ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದೇವೆ ಎಂದರು.

ರೋಟರಿ ಬೆಂಗಳೂರು ಉದ್ಯೋಗ್ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಜಿ.ಶೇಖರ್ ಮಾತನಾಡಿ, ಹಲವು ದಶಕಗಳಿಂದ ರೋಟರಿ ಸಂಸ್ಥೆಯಿಂದ ನೂರಾರು ಸಮಾಜ ಮುಖಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಬಾರಿ ಮಕ್ಕಳ ಶೈಕ್ಷಣಿಕ ಪ್ರಗತಿ ಉದ್ದೇಶದಿಂದ ಟ್ಯಾಬ್ ವಿತರಣೆ ಮಾಡಲಾಗುತ್ತಿದೆ ಎಂದರು.

ರೋಟರಿಯಿಂದ ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಗ್ರಾಮೀಣ ಭಾಗದ ರೈತಾಪಿ ಕುಟುಂಬ ಮಕ್ಕಳು ಸಮಾಜದ ಒಂದು ಉನ್ನತ ಸ್ಥಾನಕ್ಕೆ ಬರಬೇಕಿದೆ. ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುತ್ತಿದೆ ಎಂದರು.

ಸುಮಾರು 47 ವಿದ್ಯಾರ್ಥಿಗಳ ಪೈಕಿ ಇಬ್ಬರಿಗೆ ಒಂದು ಟ್ಯಾಬ್‌ನಂತೆ ಸುಮಾರು 1.5 ಲಕ್ಷ ರೂ. ವೆಚ್ಚದಲ್ಲಿ ಸುಮಾರು 24 ಟ್ಯಾಬ್ ವಿತರಣೆ ಮಾಡಲಾಗಿದೆ ರೋಟರಿ ಬೆಂಗಳೂರು ಉದ್ಯೋಗ್ ಮಾಜಿ ಅಧ್ಯಕ್ಷ ರೇಣುಕೇಶ್ ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ನರಸಿಂಹಯ್ಯ, ತಾಲೂಕು ರೋಟರಿ ಅಧ್ಯಕ್ಷ ಕೆ.ಎನ್.ವನರಾಜ, ನಿರ್ದೇಶಕ ಎಲ್.ಕುಮಾರ್, ಎಂ.ಟಿ.ನವೀನ್‌ಕುಮಾರ್, ವಿ.ಆರ್.ಸ್ವಾಮಿ, ಮಾಜಿ ಅಧ್ಯಕ್ಷ ಮಂಜುನಾಥ್, ರೋಟರಿ ಬೆಂಗಳೂರು ಉದ್ಯೋಗ್ ಸಂಸ್ಥಾಪಕ ಅಧ್ಯಕ್ಷ ರುದ್ರೇಶ್, ಕಾರ್ಯದರ್ಶಿ ಪಿ.ಜಯಶಂಕರ್, ನಿರ್ದೇಶಕರಾದ ಸುರೇಂದ್ರರಾವ್, ಮಂಜುನಾಥನ್, ಸ್ಮಿತಾ ಬಾಳಿಗ, ರವಿಕುಮಾರ್, ಮಾಜಿ ಅಧ್ಯಕ್ಷ ಎಚ್.ಜಿ.ಹೆಗ್ಡೆ, ಓಂಕಾರಪ್ಪ, ಮುಖ್ಯಶಿಕ್ಷಕಿ ಟಿ.ದೇವಾಕಿ, ಶಿಕ್ಷಕರಾದ ಎಲ್.ಮಂಜುನಾಥ್, ಸವಿತಾ, ಎಚ್.ಹೇಮಾವತಿ, ಪುಷ್ಪಾ, ಶಿವಕುಮಾರ್, ಗಂಗಮ್ಮ ಮತ್ತಿತರರು ಉಪಸ್ಥಿತರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net