

ಮಡಿಕೇರಿ:
ಸ್ಕೌಟ್, ಗೈಡ್ಸ್ ಸಂಸ್ಥೆಯ ಚಳವಳಿ ಒಂದು ಯುವ ಜನಾಂಗದ ಕೂಟ. ಈ ಚಳವಳಿಯ ಉದ್ದೇಶ ಯುವ ಪೀಳಿಗೆಯಲ್ಲಿ ಶಿಸ್ತು, ಸಂಯಮ, ಉತ್ತಮ ನಾಯಕತ್ವ, ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವುದರೊಂದಿಗೆ ಯುವ ಸಮೂಹದಲ್ಲಿ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ವೃದ್ಧಿಗೆ ಸಹಕಾರಿಯಾಗಿದೆ ಎಂದು ಸ್ಕೌಟ್ಸ್, ಗೈಡ್ಸ್ ರಾಜ್ಯ ಸಂಸ್ಥೆ ಉಪಾಧ್ಯಕ್ಷ ಎ.ಎನ್. ಮಹೇಶ್ ಹೇಳಿದರು. ಮಡಿಕೇರಿಯ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ ಕಚೇರಿಗೆ ಮಂಗಳವಾರ ಭೇಟಿ ನೀಡಿ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಕಚೇರಿ ಆವರಣದಲ್ಲಿ ನಿರ್ಮಿಸಲುದ್ದೇಶಿಸಿರುವ ಶತಮಾನೋತ್ಸವ ಭವನ ನಿರ್ಮಾಣಕ್ಕೆ ರಾಜ್ಯ ಸಂಸ್ಥೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿ ಸೂಕ್ತ ಅನುದಾನ ಪಡೆದು ಸ್ಕೌಟ್ಸ್ ಮತ್ತು ಗೈಡ್ಸ್ ನ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಸ್ಕೌಟ್ಸ್ ನ ರಾಜ್ಯ ಸಂಸ್ಥೆಯ ವತಿಯಿಂದ ಸಹಕರಿಸಲಾಗುವುದು ಎಂದರು.
ಶತಮಾನೋತ್ಸವ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಂಸ್ಥೆಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅವರ ನೇತೃತ್ವದಲ್ಲಿ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತದ ಸಹಕಾರ ಪಡೆಯಲು ಮುಂದಿನ ದಿನಗಳಲ್ಲಿ ಸಭೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ಸಿದ್ದತೆ ನಡೆಸಲಾಗುವುದು. ಕೊಡಗಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತ ಮತ್ತು ಪ್ರವಾಹ ಹಾಗೂ ಕರೋನ ಸಂದರ್ಭದಲ್ಲಿ ಸಂಸ್ಥೆಯ ಸ್ವಯಂ ಸೇವಕರು ಕೈಗೊಂಡ ಸಾಮಾಜಿಕ ಸೇವಾ ಕಾರ್ಯಗಳು ಅನುಕರಣೀಯವಾದುದು ಎಂದರು.
ಜಿಲ್ಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ವತಿಯಿಂದ ವಾರ್ಷಿಕವಾಗಿ ಕೈಗೊಳ್ಳುತ್ತಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಸ್ಕೌಟ್ಸ್ , ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಕೆ..ಟಿ. ಬೇಬಿಮ್ಯಾಥ್ಯೂ, ಕೊಡಗಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ಬೆಳೆದು ಬಂದ ಬಗ್ಗೆ ವಿವರಿಸಿದರು.