

ವಿಜಯವಾಣಿ ಸುದ್ದಿಜಾಲ ಧಾರವಾಡ
ಮರಾಠಾ ವಿದ್ಯಾಪ್ರಸಾರಕ ಮಂಡಳ 132 ವರ್ಷಗಳ ಸಂಭ್ರಮಾಚರಣೆಯಲ್ಲಿದೆ. ವರ್ಷದಿಂದ ವರ್ಷಕ್ಕೆ ಅಭಿವೃದ್ಧಿ ಕಾಣುತ್ತಿರುವ ಮಂಡಳದಿ0ದ ಕೆಜಿಯಿಂದ ಪಿಜಿವರೆಗೆ ವಿದ್ಯಾಸಂಸ್ಥೆಗಳನ್ನು ನಡೆಸಲಾಗುತ್ತಿದೆ. ಮಂಡಳದಿ0ದ ಸಮೀಪದಲ್ಲಿ ಜಾಗ ದೊರಕಿಸಿಕೊಟ್ಟರೆ ಇಂಜಿನಿಯರಿ0ಗ್ ಕಾಲೇಜು ಆರಂಭಿಸಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.
ನಗರದ ಮರಾಠಾ ವಿದ್ಯಾಪ್ರಸಾರಕ ಮಂಡಳದಲ್ಲಿ ಶನಿವಾರ ಆಯೋಜಿಸಿದ್ದ ಮಂಡಳದ ವೆಬ್‌ಸೈಟ್ ಉದ್ಘಾಟನೆ ಹಾಗೂ ಆಡಳಿತ ಕಚೇರಿ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜು ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧಾರವಾಡಕ್ಕೆ ಇನ್ನೊಂದು ಇಂಜಿನಿಯರಿ0ಗ್ ಕಾಲೇಜಿನ ಅಗತ್ಯವಿದೆ. ಮನೋಹರ ಮೋರೆ ನೇತೃತ್ವದ ಆಡಳಿತ ಮಂಡಳಿ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಸಮಾಜದ ಪ್ರತಿಯೊಬ್ಬರೂ ಅವರಿಗೆ ಕೈಜೋಡಿಸಬೇಕು. ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ವೈಯಕ್ತಿಕ ನೆರವು ನೀಡುತ್ತೇನೆ ಎಂದರು.
ಮರಾಠರು ಧರ್ಮದ ವಿರುದ್ಧ ನಡೆದವರಿಗೆ ಬುದ್ಧಿ ಕಲಿಸಿದ್ದಾರೆ. ಮರಾಠರು ಮುಸ್ಲಿಂ ವಿರೋಧಿಗಳೆಂದು ಬಿಂಬಿಸುವುದು ಸರಿಯಲ್ಲ. ಶಿವಾಜಿ ಮಹಾರಾಜರ ಬಗ್ಗೆ ಮಾತನಾಡುವವರ ಮನೆಯಲ್ಲಿ ಅವರ ಫೋಟೋ ಇರುವುದಿಲ್ಲ ಎಂಬುದು ಬೇಸರದ ಸಂಗತಿ. ಯುವ ಸಮುದಾಯ ಇತಿಹಾಸದ ಬಗ್ಗೆ ಮಾಹಿತಿ ಹೊಂದಿರಬೇಕು ಎಂದರು.
ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾಟಕ ಟ್ರಸ್ಟ್ ಅಧ್ಯಕ್ಷ ಡಾ. ಸರಜೂ ಕಾಟ್ಕರ್ ಮಾತನಾಡಿ, ಮರಾಠಾ ವಿದ್ಯಾಪ್ರಸಾರಕ ಮಂಡಳದ ಸಂಸ್ಥಾಪಕರು ಸ್ಮರಣೀಯರು. ಪ್ರತಿವರ್ಷ ಸಂಸ್ಥಾಪನಾ ದಿನ ಆಚರಿಸಬೇಕು ಎಂದರು.
ಪಾಲಿಕೆ ಸದಸ್ಯ ಡಾ. ಮಯೂರ ಮೋರೆ ಮಾತನಾಡಿ, ಸಂಸ್ಥೆಯ ಬೆಳವಣಿಗೆಗೆ ಆಡಳಿತ ಮಂಡಳಿಯ ಶ್ರಮ ಮತ್ತು ಸದಸ್ಯರ ಸಹಕಾರ ಕಾರಣ. ಕಟ್ಟಡ ನಿರ್ಮಾಣಕ್ಕೆ ನಮ್ಮ ಫೌಂಡೇಶನ್‌ನಿ0ದ 5 ಲಕ್ಷ ರೂಪಾಯಿ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಸಮಾಜ ಮುನ್ನಡೆಯಲು ಒಗ್ಗಟ್ಟು ಮತ್ತು ನಾಯಕತ್ವ ಮುಖ್ಯ ಎಂದರು.
ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಮಂಡಳದ ವೆಬ್‌ಸೈಟ್ ಉದ್ಘಾಟಿಸಿದರು. ಮರಾಠಾ ಮಂಡಳದ ಅಧ್ಯಕ್ಷ ಮನೋಹರ ಮೋರೆ ಅಧ್ಯಕ್ಷತೆ ವಹಿಸಿದ್ದರು. ಇದೇವೇಳೆ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಪಾಲಿಕೆ ಉಪ ಮೇಯರ್ ಸಂತೋಷ ಚವ್ಹಾಣ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಸಮಾಜದ ಮುಖಂಡರಾದ ಶಂಕರ ಶೇಳಕೆ, ಪ್ರಕಾಶ ಘಾಟಗೆ, ಯಲ್ಲಪ್ಪ ಚವ್ಹಾಣ, ಸುಭಾಸ ಶಿಂಧೆ, ರಾಜು ಬಿರಜೆನವರ, ಮಲ್ಲೇಶಪ್ಪ ಶಿಂಧೆ ಹಾಗೂ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳು, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.