ಜಿಲ್ಲೆಯಲ್ಲಿ ಫುಟ್ಬಾಲ್ ಬೆಳವಣಿಗೆಗೆ ಸಹಕಾರ: ಎ.ಎಸ್.ಪೊನ್ನಣ್ಣ

26adarshkdga1
Published on

ಮಡಿಕೇರಿ: ಜಿಲ್ಲೆಯಲ್ಲಿ ಕ್ರೀಡೆಗೆ ವಿಶೇಷ ಪ್ರಾತಿನಿಧ್ಯ ನೀಡಲಾಗುವುದು. ಕ್ರೀಡೆಗೆ ಸರ್ಕಾರದಿಂದ ಬರುವ ಎಲ್ಲಾ ಅನುದಾನಗಳನ್ನು ಬಳಕೆ ಮಾಡಿ, ಭ್ರಷ್ಟಾಚಾರ ರಹಿತವಾಗಿ ಆಡಳಿತ ನೀಡುತ್ತೇನೆಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹೇಳಿದರು.


ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಅಮ್ಮತಿಯ ಕಛೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.


ಜಿಲ್ಲೆಯಲ್ಲಿ ಕ್ರೀಡೆಗೆ ವಿಶೇಷ ಪ್ರೋತ್ಸಾಹ ನೀಡಬೇಕಾದ ಅವಶ್ಯಕತೆ ಇದೆ. ಚುನಾವಣೆ ಪೂರ್ವದಲ್ಲಿ ಕ್ರೀಡೆಗೆ ಉತ್ತೇಜನ ನೀಡಲಾಗುವುದೆಂದು ನನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇನೆ. ಅದರಂತೆ ನಡೆಯುತ್ತೇನೆ. ಜಿಲ್ಲೆಯಲ್ಲಿ ಆಟದ ಮೈದಾನ ಕೊರತೆ ಇದೆ ಹಾಗೂ ಇರುವ ಆಟದ ಮೈದಾನಗಳು ಪುನಶ್ಚೇತನಗೊಳಿಸಬೇಕಾಗಿದೆ ಎಂದರು.


ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆಗೆ ಬೇಕಾದ ಎಲ್ಲಾ ರೀತಿಯ ಸಹಕಾರ ಹಾಗೂ ಸುಸಜ್ಜಿತ ಫುಟ್ಬಾಲ್ ಮೈದಾನವನ್ನು ನಿರ್ಮಿಸಲು ಜಾಗ ಗುರುತಿಸಿದ್ದಲ್ಲಿ ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ಮೈದಾನವನ್ನು ನಿರ್ಮಿಸಲು ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು.


ಬೆಂಗಳೂರು ಶಾಂತಿನಗರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ, ಭಾರತ ರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಎನ್.ಎ.ಹ್ಯಾರಿಸ್ ಮಾತನಾಡಿ, ಭಾರತದಲ್ಲಿ ಫುಟ್ಬಾಲ್ ವೇಗವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಫುಟ್ಬಾಲ್‌ಗೆ ಪ್ರತ್ಯೇಕ ಯಾಪ್‌ಗೆ ಚಾಲನೆ ನೀಡಲಿದ್ದೇವೆ. ಯಾಪ್ ಮೂಲಕ ಫುಟ್ಬಾಲ್ ಪಂದ್ಯಾವಳಿ ವೀಕ್ಷಣೆ ಹಾಗೂ ಫುಟ್ಬಾಲ್ ತರಬೇತಿ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಬಲಿಷ್ಠ ಯುವಕರ ಪಡೆ ಇದೆ. ಅವರು ದುಶ್ಚಟ ಹಾಗೂ ರಾಜಕೀಯಕ್ಕೆ ಬಲಿಯಾಗದೆ ಅವರನ್ನು ಫುಟ್ಬಾಲ್‌ನತ್ತ ಸೆಳೆಯಬೇಕಾಗಿದೆ ಎಂದರು.


ಜಿಲ್ಲೆಯಲ್ಲಿ ಫುಟ್ಬಾಲ್ ಬೆಳೆಯಲು ಉತ್ತಮ ವಾತಾವರಣವಿದೆ. ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಫುಟ್ಬಾಲ್ ಕ್ಲಬ್‌ಗಳ ಸಂಖ್ಯೆಯ ಮತ್ತಷ್ಟು ಹೆಚ್ಚಾಗಬೇಕಾಗಿದೆ. ಕೊಡಗಿನಲ್ಲಿ ಅತ್ಯುತ್ತಮ ಫುಟ್ಬಾಲ್‌ಪಟುಗಳು ಇದ್ದಾರೆ. ಭಾರತದಲ್ಲಿ ಕರ್ನಾಟಕ ರಾಜ್ಯ ಇತರೆ ರಾಜ್ಯಗಳಿಗೆ ಫುಟ್ಬಾಲ್‌ನಲ್ಲಿ ಪೈಪೋಟಿ ನೀಡಿ ಬೆಳೆಯುತ್ತಿದೆ. ಟಾಪ್ ಮೂರರೊಳಗೆ ಕರ್ನಾಟಕ ಸ್ಥಾನ ಪಡೆದಿದೆ ಎಂದರು.


ಜಿಲ್ಲೆಯಲ್ಲಿ ಫುಟ್ಬಾಲ್ ಮೈದಾನಕ್ಕೆ ಬೇಕಾದ ಜಾಗ ಗುರುತಿಸಿ ಅದರ ಬಗ್ಗೆ ನನಗೂ ಹಾಗೂ ಎ.ಎಸ್.ಪೊನ್ನಣ್ಣ ಅವರಿಗೆ ಮಾಹಿತಿ ನೀಡಿ. ಖಂಡಿತವಾಗಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಜಿಲ್ಲೆಯಲ್ಲಿ ಅತ್ಯಾಧುನಿಕ ಫುಟ್ಬಾಲ್ ಮೈದಾನವನ್ನು ನಿರ್ಮಿಸುವ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ ಫುಟ್ಬಾಲ್ ಬೆಳೆಯಲು ಎಲ್ಲಾ ರೀತಿಯ ಸಹಕಾರ ಬೆಂಬಲ ನೀಡುತ್ತೇನೆಂದು ಹೇಳಿದರು.


ಅಂತರಾಷ್ಟ್ರೀಯ ಮಾಜಿ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ, ಶಾಲಾ ಮಟ್ಟದಲ್ಲಿ ವಿವಿಧ ವಿಭಾಗಗಳಲ್ಲಿ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಿ, ಫುಟ್ಬಾಲ್ ಆಟಗಾರರಿಗೆ ತರಬೇತಿ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.


ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎ.ನಾಗೇಶ್(ಈಶ್ವರ್) ಪ್ರಾಸ್ತಾವಿಕ ಮಾತನಾಡಿದರು. ಕೊಡಗು ಫುಟ್ಬಾಲ್ ಅಸೋಸಿಯೇಷನ್ ವತಿಯಿಂದ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಎನ್.ಎ.ಹ್ಯಾರಿಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ವಹಿಸಿದ್ದರು. ಈ ಸಂದರ್ಭ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಮಾಜಿ ಮಹಾಪೋಷಕರಾದ ವಿನೋದ್ ಶಿವಪ್ಪ, ರಾಜ್ಯ ಫುಟ್ಬಾಲ್ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಖಜಾಂಜಿ ದೀಪು ಮಾಚಯ್ಯ, ಉಪಾಧ್ಯಕ್ಷ ಕ್ರಿಸ್ಟೋಫರ್, ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಇಸ್ಮಾಯಿಲ್ ಕಂಡಕರೆ, ಹಾಗೂ ಜಿಲ್ಲಾ ಸಂಸ್ಥೆಯ ಫುಟ್ಬಾಲ್ ಕ್ಲಬ್ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net