

ನಾಪೋಕ್ಲು: ಬಿಲ್ಲವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಲಿರುವುದಾಗಿ ರಾಮನಗರ ಜಿಲ್ಲೆಯ ಸೋಲೂರು ಮಾಗಡಿ ತಾಲೂಕು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಪರಮ ಪೂಜ್ಯ ಶ್ರೀ ವಿಖ್ಯಾತಾನಂದ ಸ್ವಾಮೀಜಿ ವಚನ ನೀಡಿದರು.
ಇಲ್ಲಿಯ ಭಗವತಿ ದೇವಾಲಯದ ಸಭಾಂಗಣದಲ್ಲಿ ಬಿಲ್ಲವ ಜನಾಂಗದವರನ್ನು ಭೇಟಿ ಇತ್ತೀಚೆಗೆ ಭೇಟಿಯಾಗಿ ಮಾತನಾಡಿದ ಅವರು, ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ, ವಸತಿ ಸೌಕರ್ಯ ಹಾಗೂ ಉನ್ನತ ಮಟ್ಟದ ವ್ಯಾಸಂಗ ನಂತರ ಉದ್ಯೋಗ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿ ಸಮಾಜದಲ್ಲಿ ಸುಸಂಸ್ಕೃತ ಸಜ್ಜನ ವ್ಯಕ್ತಿಯಾಗಿ ಬಾಳಲು ಬಿಲ್ಲವ ಸಮಾಜದವರಿಗೆ ಆಶೀರ್ವಚನ ನೀಡಿದರು.
ರಾಮನಗರ ಜಿಲ್ಲೆಯ ಸೋಲೂರು ಮಾಗಡಿ ತಾಲೂಕು ರೇಣುಕಾ ಯಲ್ಲಮ್ಮ ದೇವಿ ಆಲಯದ ಜಾತ್ರಾ ಮಹೋತ್ಸವ ಹಾಗೂ ಪೀಠಾರೋಹಣ ತೃತೀಯ ವಾರ್ಷಿಕೋತ್ಸವ ಮತ್ತು ಆರೋಗ್ಯ ಉಚಿತ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ರಕ್ತದಾನ ಶಿಬಿರ ಫೆ.12ರ ಬುಧವಾರ ಮಾಗಡಿ ತಾಲೂಕಿನ ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದಲ್ಲಿ ಜರುಗಲಿದೆ. ಎಲ್ಲರೂ ಭಾಗವಹಿಸುವಂತೆ ಆಮಂತ್ರಣ ನೀಡಿದರು. ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜ ಸದಸ್ಯರು ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು.
ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ, ಕಾರ್ಯದರ್ಶಿ ಲೋಹಿತ್, ಜನಾರ್ದನ ಬೆಟ್ಟಗೇರಿ, ನಾಪೋಕ್ಲು ಬಿಲ್ಲವ ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.