

ಕೋಲಾರ: ದೆಹಲಿ ಮಾದರಿಯಲ್ಲಿ ಕಸ ವಿಲೇವಾರಿಯನ್ನು ಮಾಡಲು ಮುಂದಾದರೆ, ಅಗತ್ಯ ಸಲಕರಣೆ ಒದಗಿಸಲಾಗುವುದು ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ನಗರಸಭೆಯಿಂದ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲ ಮಾತನಾಡಿ, ದಿಲ್ಲಿಯಲ್ಲಿರುವ ವ್ಯವಸ್ಥೆ ಸಂಬಂಧಿತ 8-&10 ಪ್ರಸ್ತಾವನೆಗಳಿದ್ದು, ಅದನ್ನು ನೋಡಿ ನಗರಸಭೆಯವರು ಒಪ್ಪಬೇಕು. ಇದರಿಂದ ತ್ಯಾಜ್ಯ ವಿಲೇ ಕಾರ್ಯದಲ್ಲಿ ಪೌರಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ವಾರದ ಎಲ್ಲ ದಿನ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ನಾವೆಲ್ಲರೂ ಚಿರ ಋಣಿಯಾಗಿರಬೇಕು. ಹಬ್ಬದ ದಿನಗಳಲ್ಲಿ ನಮಗೆ ಹಬ್ಬದ ಸಂಭ್ರಮವಿದ್ದರೆ, ಅವರಿಗೆ ಕಸ ವಿಲೇವಾರಿಯ ಚಿಂತೆಯಾಗಿರುತ್ತದೆ. ಅವರ ಸೇವೆಯನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ತಿಳಿಸಿದರು.
ಪೌರ ಕಾರ್ಮಿಕರು ಇಲ್ಲದೆ, ನಗರ ಸ್ವಚ್ಛವಾಗಿರಲು ಸಾಧ್ಯವಿಲ್ಲ. ಸ್ವಚ್ಛತೆ ಇಲ್ಲದಿದ್ದರೆ ರೋಗಗಳು ಹರಡಿ ಸಾಕಷ್ಟು ಸಮಸ್ಯೆ ಉಂಟಾಗುತ್ತವೆ. ಹೀಗಾಗಿ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವ ಜವಾಬ್ದಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳದ್ದಾಗಿದೆ ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಲಕ್ಷಿ$್ಮದೇವಮ್ಮ ಮಾತನಾಡಿ, ಪೌರಕಾರ್ಮಿಕರಲ್ಲ. ಪೌರ ಬಂಧುಗಳು. ಅವರ ಸೇವೆಯೂ ಅನನ್ಯವಾದದ್ದು, ಕಾಯಿಲೆ ಬರುವುದನ್ನು ತಡೆಯುವವರು, ಅವರನ್ನು ಕೀಳರಿಮೆಯಿಂದ ಕಾಣಬಾರದು ಎಂದು ತಿಳಿಸಿದರು.
ಇದೇ ವೇಳೆ ಪೌರ ಕಾರ್ಮಿಕರು, ನಿವೃತ್ತ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಗರಸಭೆ ಉಪಾಧ್ಯಕ್ಷೆ ಸಂಗೀತಾ ಜಗದೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್, ಕೆಯುಡಿಎ ಅಧ್ಯಕ್ಷ ಮೊಹಮ್ಮದ್ ಹನೀಫ್, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ನಗರಸಭೆ ಸದಸ್ಯರಾದ ಪ್ರಸಾದ್ ಬಾಬು, ಪ್ರವಿಣ್ಗೌಡ, ರಾಕೇಶ್, ಮಂಜುನಾಥ್, ಇದಾಯತ್ ಉಲ್ಲಾ, ಗುಣಶೇಖರ್, ಪೌರಾಯುಕ್ತ ನವೀನ್ ಚಂದ್ರ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಮಂಜುನಾಥ್,
ಉಪಾಧ್ಯಕ್ಷ ನಾರಾಯಣಸ್ವಾಮಿ ಇತರರಿದ್ದರು.
ಪೌರಕಾರ್ಮಿಕರಿಗೆ ಮನವಿ: ಪೌರಕಾರ್ಮಿಕರು ಕಸ ವಿಲೇವಾರಿ ಮಾಡಿ ಸುತ್ತಮುತ್ತಲಿನ ಜಾಗ ಸ್ವಚ್ಛಗೊಳಿಸುತ್ತಾರೆ. ದೇವರಿಗೆ ನಮಸ್ಕಾರ ಹಾಕುವ ಮೊದಲು ಪೌರಕಾರ್ಮಿಕರಿಗೆ ನಮಿಸಬೇಕು. ಅವರಿಲ್ಲದೇ ಹೋದರೆ ರೋಗರುಜಿನಗಳು ಹರಡಿ ನಾವೆಲ್ಲರೂ ಆಸ್ಪತ್ರೆಗಳಲ್ಲಿ ಇರಬೇಕಾದ ಪರಿಸ್ಥಿತಿ ಬರುತ್ತಿತ್ತು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಹೇಳಿದರು. ಪೌರಕಾರ್ಮಿಕರು 2 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲೇಬೇಕು. ಕಸ ನಿವಾರಣೆಗೆ ಎಲ್ಲರೂ ಸಹಕರಿಸಬೇಕು. ಗುತ್ತಿಗೆ ಆಧಾರದ ಮೇರೆಗೆ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕರನ್ನು ಕಾಯಂ ಮಾಡಿದ್ದೇ ಸಿದ್ದರಾಮಯ್ಯ. ಹೀಗಾಗಿ ನಾವೆಲ್ಲರೂ ನಿಮ್ಮಪರ ಇರಲಾಗುವುದು. ಕಸ ಹಾಗೂ ನೀರಿನ ವಿಚಾರವಾಗಿ ನಗರಸಭೆ ಸದಸ್ಯರಿಗೆ ಜನರಿಂದ ಬೆಳಗ್ಗೆ ಕರೆಗಳು ಬರುತ್ತವೆ. ಅವುಗಳನ್ನು ಟಾರ್ಚರ್ ಎಂದುಕೊಳ್ಳಬೇಡಿ, ಜವಾಬ್ದಾರಿ ಅಂದುಕೊಂಡು ಕೆಲಸ ಮಾಡಿ ಎಂದು ಮನವಿ ಮಾಡಿದರು.
ಜನಸಂಖ್ಯೆಗೆ ಅನುಗುಣವಾಗಿ ಪೌರ ಸಿಬ್ಬಂದಿ ಇಲ್ಲ: ಪೌರಕಾರ್ಮಿಕರ ಆರೋಗ್ಯ ಸುಧಾರಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಹಲವು ಕಾರ್ಯಕ್ರಮಗಳನ್ನು ಸರ್ಕಾರ ನೀಡಿದೆ. 2011ರಲ್ಲಿ ಪ್ರಥಮ ಬಾರಿಗೆ ಆಚರಣೆ, ಕ್ರೀಡಾಕೂಟ, ಆರೋಗ್ಯ ತಪಾಸಣೆ ಸೇರಿ ನಾನಾ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದು ಪೌರಾಯುಕ್ತ ನವೀನ್ ಚಂದ್ರ ತಿಳಿಸಿದರು. ಪೌರಕಾರ್ಮಿಕರು, ವೈದ್ಯರು, ಪೊಲೀಸ್, ಸೈನಿಕ, ಶಿಕ್ಷಕರಿಗಿಂತಲೂ ಹೆಚ್ಚಾಗಿದ್ದು, ಕೋಲಾರದಲ್ಲಿ 2 ಲಕ್ಷ ಜನರಿಗೆ 250 ಕಾರ್ಮಿಕರು ಇದ್ದಾರೆ. ಕಡಿಮೆ ಸಂಖ್ಯೆಯಿದ್ದರೂ ಕಸದ ಕೋಲಾರ ಬದಲಿಗೆ ಸ್ವಚ್ಛ ಕೋಲಾರವನ್ನಾಗಿಸಲು ಪಣ ತೊಟ್ಟಿದ್ದಾರೆ. ಅವರಿಗೆ ಪ್ರೋತ್ಸಾಹ ಅಗತ್ಯ ಎಂದರು.
ಟೀಕೆಗಳಿಗೆ ಕೇರ್ ಮಾಡಲ್ಲ: ನಗರ ಅಭಿವೃದ್ಧಿ ಆಗುತ್ತಿದ್ದು, ಟೀಕೆಗಳಿಗೆ ಕೇರ್ ಮಾಡುವುದಿಲ್ಲ. ನಗರದಲ್ಲಿ ಕುಡಾದಿಂದ ಶ್ರೀನಿವಾಸಪುರ ರಸ್ತೆಯ ಕಡೆ ಹಾಗೂ ಮಾಲೂರು ರಸ್ತೆಯ ಎಪಿಎಂಸಿ ಬಳಿ 2 ಹೊಸ ವೃತ್ತಗಳನ್ನು ನಿರ್ಮಿಸಲಾಗುವುದು. ಕೋಡಿಕಣ್ಣೂರು ಕೆರೆ ಅಭಿವೃದ್ಧಿ ಮಾಡಲಾಗುತ್ತದೆ. ಒಟ್ಟಾರೆ ನಗರಸಭೆ, ಕುಡಾದಿಂದ 8 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಕೊತ್ತೂರು ಜಿ.ಮಂಜುನಾಥ್ ತಿಳಿಸಿದರು.