

ಹೊನ್ನಾಳಿ: ಗ್ರಾಮೀಣ ಮಟ್ಟದ ಸಹಕಾರ ಸಂಘಗಳಲ್ಲಿ ಇನ್ನೂ ರಾಜಕೀಯ ಹಸ್ತಕ್ಷೇಪ ಇಲ್ಲದಿರುವ ಕಾರಣದಿಂದ ಗಣನೀಯವಾಗಿ ಮೇಲುಗೈ ಸಾಧಿಸುತ್ತಿವೆ ಎಂದು ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ಸುರೇಂದ್ರಗೌಡ ಹೇಳಿದರು.
ತಾಲೂಕಿನ ಗೊಲ್ಲರಹಳ್ಳಿ ಹಾಲು ಶೀಥಲೀಕರಣ ಘಟಕದಲ್ಲಿ ಗುರುವಾರ ರಾಜ್ಯ ಸಹಕಾರ ಮಹಾ ಮಂಡಳಿ, ಜಿಲ್ಲಾ ಒಕ್ಕೂಟದ ಸಹಯೋಗದಲ್ಲಿ ಅವಳಿ ತಾಲೂಕಿನ ಪ್ರಾಥಮಿಕ ಪತ್ತಿನ ಸಹಕಾರ ಸಂಘ, ಕೃಷಿಯೇತರ ಪತ್ತಿನ ಸಂಘಗಳ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯದರ್ಶಿಗಳು ಹೊಸ ಮಾರ್ಗಸೂಚಿಗಳು ಮತ್ತು ನೀತಿ ನಿಯಮಗಳನ್ನು ತಿಳಿದು ರೈತರಿಗೆ ಸಮಗ್ರ ಮಾಹಿತಿ ನೀಡುವಂತಹ ಕೆಲಸ ಮಾಡಬೇಕಿದೆ. ಈ ರೀತಿಯ ತರಬೇತಿ ಕಾರ್ಯಾಗಾರಗಳು ಪ್ರಸ್ತುತ ಅತ್ಯಂತ ಅವಶ್ಯಕವಿದ್ದು, ಇಂತಹ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಯುವಂತೆ ಕಾರ್ಯರೂಪಿಸಬೇಕಿದೆ ಎಂದರು.
ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕೆ.ಎಚ್.ಷಣ್ಮುಖಪ್ಪ ಮಾತನಾಡಿ, ತರಬೇತಿಗೆ ವಯಸ್ಸಿನ ಮಿತಿ ಇರುವುದಿಲ್ಲ. ಸಮಾಜದಲ್ಲಿ ಪ್ರತಿನಿತ್ಯ ಸಂಭವಿಸುವ ಬದಲಾವಣೆಗೆ ನಾವೆಲ್ಲರೂ ಹೊಂದಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ತರಬೇತಿಯು ಸಹಕಾರಿ ಆಗಿದೆ. ಆದ್ದರಿಂದ ಇಂತಹ ತರಬೇತಿ ಕಾರ್ಯಾಗಾರವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಕೇಂದ್ರ ಸರ್ಕಾರ ಕಂಪ್ಯೂಟರೀಕರಣಗೊಳಿಸಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಘದ ಅಧ್ಯಕ್ಷರು ಸಹ ಅದರ ಬಗ್ಗೆ ಅರಿವು ಪಡೆಯುವ ಅವಶ್ಯಕತೆ ಇದೆ ಎಂದರು.
ಇತ್ತೀಚೆಗೆ ಹಲವಾರು ಸಹಕಾರ ಸಂಘಗಳಲ್ಲಿ ಚುನಾವಣೆ ನಡೆದಿದ್ದು, ನೂತನ ಆಡಳಿತ ಮಂಡಳಿ ರಚನೆಯಾಗಿರುತ್ತದೆ. ಇಂತಹ ಆಡಳಿತ ಮಂಡಳಿ ಸದಸ್ಯರಿಗೆ ಕಾಲಕಾಲಕ್ಕೆ ಬದಲಾದ ಕಾಯ್ದೆ ಕಾನೂನಿನ ತಿದ್ದುಪಡಿಗಳ ಬಗ್ಗೆ ತರಬೇತಿ ನೀಡುವುದು ಒಕ್ಕೂಟದ ಆಶಯವಾಗಿದೆ ಎಂದರು.
ಅತಿಥಿಗಳಾಗಿ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷೆ ಎಚ್.ಜಿ.ಮಂಜುಳಾ ಗಣೇಶ್, ನಿರ್ದೇಶಕರಾದ ಎಂ.ಜಿ ಷಣ್ಮುಖಪ್ಪ, ಕೆ.ಎಚ್.ಮಹೇಶ್, ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಜಿ.ನವೀನ್ಕುಮಾರ್, ಜಿಲ್ಲಾ ಡಿಸಿಸಿ ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಗುರುರಾಜ್ ಜಿ. ಅಂಬೇಕರ್, ನಿವೃತ್ತ ಸಹಾಯಕ ನಿಬಂಧಕ ಲಿಯಾಖತ್ ಅಲಿ, ಜಿಲ್ಲಾ ಸಹಕಾರ ಒಕ್ಕೂಟ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ, ಜಿಲ್ಲಾ ಸಹಕಾರ ಶಿಕ್ಷಕ ಕೆ.ಎಚ್.ಸಂತೋಷ್ ಕುಮಾರ್, ಜಿಲ್ಲಾ ಸಹಕಾರ ಒಕ್ಕೂಟ ವ್ಯವಸ್ಥಾಪಕ ಕೆ.ಎಂ.ಜಗದೀಶ್, ವಿ.ರಂಗನಾಥ ಮತ್ತು ಆರ್.ಸ್ವಾಮಿ ಇತರರಿದ್ದರು.