

ಹಾವೇರಿ: ತಾಲೂಕಿನ ಹೊಸ ಕಿತ್ತೂರು ಗ್ರಾಮದ ಕಿತ್ತೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಣ ದುರುಪಯೋಗ ಪಡಿಸಿಕೊಂಡ ಆರೋಪದಡಿ ಸಂಘದ ಈ ಹಿಂದಿನ ಇಬ್ಬರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಘದ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೊರಡೂರು ಗ್ರಾಮದ ಅಶೋಕ ಅರಳಿ ಹಾಗೂ ಶ್ರೀಧರ ಸಂಗಪ್ಪ ಗಡ್ಡದ ಎಂಬುವರ ವಿರುದ್ಧ ದೂರು ದಾಖಲಾಗಿರುವುದು.
ಸದ್ಯ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗಯ್ಯ ಹಿರೇಮಠ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. 1ನೇ ಆರೋಪಿ ಅಶೋಕ ತನ್ನ ಆಡಳಿತಾವಧಿಯಲ್ಲಿ ಫಲಾನುಭವಿಗಳಿಗೆ ಸಾಲ ಕೊಡುವಾಗ ಸರಿಯಾಗಿ ದಾಖಲೆ ಪಡೆಯದೆ 114 ಜನ ಫಲಾನುಭವಿಗಳಿಗೆ 16.28 ಲಕ್ಷ ರೂ. ಹಣ ಮಂಜೂರು ಮಾಡಿದ್ದು, ಅದರಲ್ಲಿ 3.96 ಲಕ್ಷ ರೂ. ದುರುಪಯೋಗ ಆಗಿದೆ. 2ನೇ ಆರೋಪಿ ಶ್ರೀಧರ 30 ಸಾವಿರ ರೂ. ದುರುಪಯೋಗ ಮಾಡಿದ್ದಾರೆ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.