ಬಿರುಬೇಸಿಗೆಯಲ್ಲೂ ಮೈಸೂರಿನಲ್ಲಿ ತಣ್ಣನೆಯ ವಾತಾವರಣ

mysore zoo
Published on

ಮೈಸೂರು: ನಗರದ ಯಾವುದೇ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೂ ತಣ್ಣನೆಯ ಅನುಭವ ದೊರೆಯುವುದಿಲ್ಲ. ಬಿರುಬೇಸಿ ಗೆಯಲ್ಲಿಯೂ ತಣ್ಣನೆಯ ಅನುಭವ ಪಡೆಯಬೇಕಾದರೆ ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಬೇಕು.

ಮೃಗಾಲಯದ ವಾತಾವಾರಣ ಬೇಸಿಗೆಯಲ್ಲಿಯೂ ಕೂಲ್ ಆಗಿದೆ. ಸ್ಪಿಂಕ್ಲರ್ ಮೂಲಕ ನೀರು ಚಿಮ್ಮಿಸುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯದ ವಾತಾವಾರಣ ತಣ್ಣನೆಯ ಅನುಭವ ನೀಡುತ್ತಿದೆ. ಸಾಕಷ್ಟು ವನ್ಯಪ್ರಾಣಿಗಳು ಬೇಸಿಗೆಯ ಧಗೆ ಸಹಿಸಿಕೊಳ್ಳುವುದಿಲ್ಲ. ಅರಣ್ಯದಲ್ಲಾದರೆ ನದಿ, ತೊರೆಗಳಲ್ಲಿ ಪ್ರಾಣಿಗಳು ಮಿಂದೆದ್ದು ಬರುತ್ತವೆ. ಆದರೆ ಇಲ್ಲಿ ಅಂಥ ವ್ಯವಸ್ಥೆ ಇಲ್ಲ. ಮೃಗಾಲಯದಲ್ಲಿ ಪ್ರಾಣಿಗಳಿಗೋಸ್ಕರ ನಿರ್ಮಾಣ ಮಾಡಿರುವ ತೊಟ್ಟಿಗಳಲ್ಲಿ ತಣ್ಣೀರು ತುಂಬಿಸಿದರೂ ಮಧ್ಯಾಹ್ನದ ಹೊತ್ತಿಗೆ ಬಿಸಿಲಿನ ತಾಪಕ್ಕೆ ತಣ್ಣೀರು ಬಿಸಿನೀರಾಗುತ್ತದೆ.

ತೊಟ್ಟಿಯ ನೀರು ಪ್ರಾಣಿಗಳಿಗೆ ತಣ್ಣನೆಯ ಅನುಭವ ನೀಡಲು ಸಾಧ್ಯವಿಲ್ಲದಿರುವ ಹಿನ್ನೆಲೆಯಲ್ಲಿ ಪ್ರತಿಬಾರಿ ಬೇಸಿಗೆ ಬಂದಾಗ ಮೃಗಾ ಲಯ ಸಿಬ್ಬಂದಿಗಳು ಸ್ಪಿಂಕ್ಲರ್ ಮೂಲಕ ಪ್ರಾಣಿಗಳಿಗೆ ನೀರು ಹಾಯಿಸುತ್ತಾರೆ. ಅದೇ ರೀತಿ ಈ ಬಾರಿಯೂ ಸ್ಪಿಂಕ್ಲರ್ ಮೂಲಕ ನೀರು ಹಾಯಿಸಲಾಗುತ್ತಿದೆ. ವನ್ಯಪ್ರಾಣಿಗಳು ಸಂತೃಪ್ತಿಯಿಂದ ತಣ್ಣೀರಿಗೆ ತಮ್ಮ ಮೈಯೊಡ್ಡಿ ಬಿಸಿಲಿನ ತಾಪದಿಂದ ಪಾರಾಗುತ್ತಿವೆ. ನಗರದಲ್ಲಿ ಬಿಸಿಲಿನ ತಾಪಮಾನ 35 ರಿಂದ 36 ಡಿಗ್ರಿ ಸೆಲ್ಸಿಯಸ್‌ನಷ್ಟು ಕಾಣಿಸಿಕೊಂಡಿದೆ. ಇಂಥ ಸುಡು ಬಿಸಿಲಿನಲ್ಲಿಯೂ ಮೃಗಾಲಯದ ಸಿಬ್ಬಂದಿಗಳು ವನ್ಯಪ್ರಾಣಿಗಳು ಮಳೆಗಾಲದ ಅನುಭವ ನೀಡುತ್ತಿದ್ದಾರೆ.

ಸಾಮಾನ್ಯವಾಗಿ ಆನೆ, ಚಿಂಪಾಂಜಿ, ಗೊರಿಲ್ಲಾ, ೆಂಡಾಮೃಗ, ಕಾಡೆತ್ತು ಸೇರಿದಂತೆ ವಿವಿಧ ಪ್ರಾಣಿಗಳು ಬೇಸಿಗೆಯಲ್ಲಿ ತಮ್ಮ ಮೈಯನ್ನು ತಣ್ಣೀರಿಗೆ ಒಡ್ಡಿಕೊಳ್ಳಲು ಇಷ್ಟ ಪಡುತ್ತವೆ. ಚಿರತೆ, ಸಿಂಹ, ಹುಲಿಗಳು ಸ್ಪಿಂಕ್ಲರ್ ಮೂಲಕ ಹಾರಿಸುವ ನೀರಿಗೆ ಮೈಯೊಡ್ಡಲು ಆಸಕ್ತಿ ತೋರುವುದಿಲ್ಲ. ಪಕ್ಷಿಗಳಿಗೆ ನೆರಳಿನ ಹೊದಿಕೆ ಇರುವ ಹಿನ್ನೆಲೆಯಲ್ಲಿ ಪಕ್ಷಿಗಳು ಬಿಸಿಲ ಬೇಗೆಯಿಂದ ಪಾರಾಗಿವೆ. ಕೆಲವು ಪ್ರಾಣಿ ಮನೆಗಳಲ್ಲಿ ಫ್ಯಾನ್‌ಗಳು ಹಾಗೂ ಕೂಲರ್‌ಗಳನ್ನು ಅಳವಡಿಸಲಾಗಿದೆ.

ಹಿಮಾಲಯದ ಕಪ್ಪು ಕರಡಿಗಳಿಗೆ ಉಷ್ಣಾಂಶವನ್ನು ನಿಯಂತ್ರಿಸಲು ಸಹಾಯವಾಗುವಂತೆ ಆಹಾರವನ್ನು ಐಸ್‌ಬ್ಲಾಕ್ ರೀತಿಯಲ್ಲಿ ನೀಡಲಾಗುತ್ತಿದೆ. ವಾನರ ಜಾತಿಯ ಪ್ರಾಣಿಗಳಾದ ಗೊರಿಲ್ಲಾ, ಒರಾಂಗೂಟಾನ್, ಚಿಂಪಾಂಜಿ ಇತ್ಯಾದಿ ಪ್ರಾಣಿಗಳಿಗೆ ದಿನಕ್ಕೆ ಎರಡು ಬಾರಿ ತಾಜಾ ಎಳನೀರು, ನೀರಿನಾಂಶವುಳ್ಳ ತರಕಾರಿ, ಕಲ್ಲಂಗಡಿ ಹಣ್ಣು, ಸೌತೆಕಾಯಿ, ಕರಬೂಜ ನೀಡಲಾಗುತ್ತಿದೆ. ಅಲ್ಲದೆ, ಓಆರ್‌ಎಸ್‌ಅನ್ನು ಅವುಗಳ ಆಹಾರದಲ್ಲಿ ಬಳಸಲಾಗುತ್ತಿದೆ.

ಎಲ್ಲ ಬಗೆಯ ಸಸ್ಯಹಾರಿ ಪ್ರಾಣಿ ಮನೆಗಳಲ್ಲಿ ಕೆಸರಿನ ಕೊಳ ನಿರ್ಮಿಸುವ ಮೂಲಕ ಅವುಗಳಿಗೆ ನೈಸರ್ಗಿಕ ತಣ್ಣನೆಯ ವಾತಾವರಣ ಕಲ್ಪಿಸಲಾಗಿದೆ. ಎಲ್ಲ ಪ್ರಾಣಿಗಳ ಮನೆಗಳಲ್ಲಿ ಚಪ್ಪರ ನಿರ್ಮಿಸಲಾಗಿದೆ. ಪ್ರತಿ ಪ್ರಾಣಿ ಮನೆಗಳಲ್ಲಿ ಉಷ್ಣಾಂಶ ತಿಳಿದುಕೊಳ್ಳಲು ಉಷ್ಣಮಾಪಕ ಅಳವಡಿಸಲಾಗಿದೆ.

ಮುಂಜಾಗ್ರತಾ ಕ್ರಮ: ಮೈಸೂರು ಮೃಗಾಲಯ, ಕಾರಂಜಿ ಕೆರೆ ಹಾಗೂ ಕೂರ್ಗಳ್ಳಿಯ ರಕ್ಷಣಾ ಕೇಂದ್ರದಲ್ಲಿ ವನ್ಯಜೀವಿಗಳಿಗೆ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಹಲವಾರು ಕ್ರಮಗಳನ್ನು ಅನುಸರಿಸಲಾಗಿದೆ. ಮೃಗಾಲಯ ಆವರಣದ ಪ್ರವೇಶ ದ್ವಾರದಲ್ಲಿ ಸೋಂಕು ನಿರೋದಕ ದ್ರವವನ್ನು ಕಟ್ಟುನಿಟ್ಟಾಗಿ ಅಳವಡಿಸಲಾಗಿದೆ. ಎಲ್ಲ ಪ್ರಾಣಿಗಳ ಮೇಲೆ ವೈದ್ಯಕೀಯ ಕಣ್ಗಾವಲು ಇರಿಸಲಾಗಿದೆ. ಪ್ರಾಣಿಗಳ ಮಲ ಮಾದರಿಯನ್ನು ಸಂಗ್ರಹಿಸಿ ಪ್ರಾದೇಶಿಕ ರೋಗ ನಿರ್ಣಯ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಮೃಗಾಲಯಕ್ಕೆ ಕೋಳಿಗಳನ್ನು ಜೀವಂತವಾಗಿ ತಂದು ಅವುಗಳಿಗೆ ರೋಗಗಳು ಇವೆಯೇ ಎಂದು ಪರೀಕ್ಷಿಸಿ ನಂತರ ಕೋಳಿ ಮಾಂಸವನ್ನು ಪೊಟ್ಯಾಸಿಯಮ್ ಪರ್ಮಾಗನೇಟ್ ದ್ರಾವಣದಿಂದ ಚೆನ್ನಾಗಿ ತೊಳೆದು ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net