

ಚಳ್ಳಕೆರೆ: ಬಿಸಿಯೂಟ ತಯಾರಿಸುವ ಕೋಣೆಯಲ್ಲಿ ಶುಚಿತ್ವ ಕಾಪಾಡಿ, ರುಚಿಯಾದ ಅಡುಗೆ ತಯಾರಿಸುವ ಜಾಣ್ಮೆ ತಯಾರಕ ಸಿಬ್ಬಂದಿಯಲ್ಲಿ ಇರಬೇಕು ಎಂದು ಬಿಇಒ ಕೆ.ಎಸ್.ಸುರೇಶ್ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ 2023-24ನೇ ಸಾಲಿನ ಬಿಸಿಯೂಟ ತಯಾರಕರ ಮೂರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಯಲ್ಲಿ ಮಧ್ಯಾಹ್ನದ ಊಟ ನೀಡುವ ಯೋಜನೆ ಮಹತ್ವದ್ದಾಗಿದೆ. ಇದು ಮಕ್ಕಳ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುತ್ತದೆ ಎಂದರು.
ಅಡುಗೆ ತಯಾರಕ ಸಿಬ್ಬಂದಿಯಲ್ಲಿ ನಿರ್ಲಕ್ಷ್ಯತೆ ಇರಬಾರದು. ಸದಾ ಜಾಗ್ರತ ಕ್ರಮಗಳನ್ನು ಅನುಸರಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಬಿಸಿಯೂಟ ತಯಾರಿಸುವ ಸ್ಥಳಕ್ಕೆ ಮಕ್ಕಳು ಬಾರದಂತೆ ಎಚ್ಚರ ವಹಿಸಬೇಕು. ಪೌಷ್ಟಿಕ ಆಹಾರ ತಯಾರಿಕೆ ಮತ್ತು ಶುದ್ಧ ನೀರಿನ ಬಳಕೆಯಲ್ಲಿ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಬೇಕು ಎಂದು ತಿಳಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ತಿಪ್ಪೇಸ್ವಾಮಿ ಮಾತನಾಡಿ, ದಾಸೋಹ ಯೋಜನೆಗೆ ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡುತ್ತಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಮತ್ತು ಮಕ್ಕಳ ದಾಖಲಾತಿ ಹೆಚ್ಚಬೇಕಿದೆ.
ತಾಲೂಕಿನಲ್ಲಿ ಒಂದರಿಂದ ಹತ್ತನೇ ತರಗತಿಯ 389 ಸರ್ಕಾರಿ ಶಾಲೆ, 46 ಅನುದಾನಿತ ಶಾಲೆಗಳು, 14 ಅನುದಾನಿತ ಪ್ರೈಮರಿ ಶಾಲೆಗಳಲ್ಲಿ ಕಲಿಯುತ್ತಿರುವ 41,897 ವಿದ್ಯಾರ್ಥಿಗಳು ಬಿಸಿಯೂಟ ಯೋಜನೆಯಲ್ಲಿದ್ದಾರೆ ಎಂದರು.
ಕಾರ್ಯಾಗಾರದಲ್ಲಿ ದಾದಾಪೀರ್, ಲಿಂಗರಾಜ್, ಶಿವಣ್ಣ, ರಾಧ, ಮಹಾಂತೇಶ, ಈಶ್ವರಪ್ಪ ಇತರರಿದ್ದರು.