ಪೊಲೀಸರಿಗಾಗಿ ಠಾಣೆಯಲ್ಲೇ ಅಡುಗೆ: ಬಂದೋಬಸ್ತ್ ಸಿಬ್ಬಂದಿಗೆ ಆಹಾರ ಸಮಸ್ಯೆ ಹಿನ್ನೆಲೆ | ಆರೋಗ್ಯ ಕಾಳಜಿ ಕಾರಣ

police 28 mar 20
Published on

ಬೆಂಗಳೂರು: ಕರೊನಾ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಜನಸಂಚಾರ ನಿಯಂತ್ರಿಸಲು ಬಂದೋಬಸ್ತ್​ನಲ್ಲಿ ತೊಡಗಿರುವ ಪೊಲೀಸರಿಗೆ ಊಟದ ಸಮಸ್ಯೆ ಎದುರಾಗಿದ್ದು, ನಗರದ ಕೆಲ ಠಾಣೆಗಳಲ್ಲಿಯೇ ಊಟ ತಯಾರಿಸಿ ಪೂರೈಕೆ ಮಾಡಲಾಗುತ್ತಿದೆ.

ದೇಶದಲ್ಲೆಡೆ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾ.25 ರಿಂದ 21 ದಿನಗಳವರೆಗೆ (ಏ.14) ದೇಶದಾದ್ಯಂತ ಲಾಕ್​ಡೌನ್ ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ ಹೋಟೆಲ್, ಅಂಗಡಿ-ಮುಂಗಟ್ಟು, ಉಪಹಾರ ಕೇಂದ್ರ ಸೇರಿ ಅನಗತ್ಯ ಮಳಿಗೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

ಜನಸಂಚಾರ ತಡೆಯುವ ನಿಟ್ಟಿನಲ್ಲಿ ನಗರದೆಲ್ಲೆಡೆ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ದಿನವಿಡೀ ತಲೆಬಿಸಿ ಮಾಡಿಕೊಂಡು ಬಂದೋ ಬಸ್ತ್​ನಲ್ಲಿ ತೊಡಗಿರುವ ಪೊಲೀಸರಿಗೆ ಸರಿಯಾದ ಹೊತ್ತಿಗೆ ಊಟ

ಸಿಗದೆ ಪರದಾಡುವಂತಾಗಿದೆ. ಇದರಿಂದಾಗಿ ಕೆಲ ಠಾಣೆಗಳಲ್ಲಿಯೇ ಅಡುಗೆ ತಯಾರಿಸಲಾಗುತ್ತಿದೆ. ಮತ್ತೆ ಕೆಲವೆಡೆ ಇಲಾಖೆ ವತಿಯಿಂದಲೇ ಊಟದ ಪಾರ್ಸೆಲ್ ನೀಡಲಾಗುತ್ತಿದೆ.

ಎಲ್ಲ ಠಾಣೆಗಳಲ್ಲಿ ಅಡುಗೆ ವ್ಯವಸ್ಥೆ ಇಲ್ಲ!

ಆಗ್ನೇಯ ವಿಭಾಗದ ಮಡಿವಾಳ, ಕೋರಮಂಗಲ ಹಾಗೂ ಪಶ್ಚಿಮ ವಿಭಾಗದ ರಾಜರಾಜೇಶ್ವರಿನಗರ ಪೊಲೀಸ್ ಠಾಣೆ ಸೇರಿ ಇನ್ನೂ ಕೆಲ ಠಾಣೆಗಳಲ್ಲಿ ಮಾತ್ರ ಅಡುಗೆ ತಯಾರಿಸಿ ಸಿಬ್ಬಂದಿಗೆ ಊಟ ಒದಗಿಸಲಾಗುತ್ತಿದೆ. ಆಯಾ ಉಪವಿಭಾಗದ ಎಸಿಪಿ ಹಾಗೂ ಠಾಣಾಧಿಕಾರಿ, ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಮುತುವರ್ಜಿ ವಹಿಸಿ ಠಾಣೆಯಲ್ಲೇ ಅಡುಗೆ ಮಾಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ, ಇದು ಕೆಲವೇ ಠಾಣೆಗಳಿಗೆ ಸೀಮಿತವಾಗಿದೆ. ನಗರದ ಬಹುತೇಕ ಕಡೆಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಹೊರಗಡೆಯಿಂದ ಪಾರ್ಸೆಲ್ ಊಟ ತರಿಸಲಾಗುತ್ತಿದೆ. ಬಂದೋಬಸ್ತ್​ನಲ್ಲಿರುವ ಸಿಬ್ಬಂದಿ ಪಾರ್ಸೆಲ್ ಊಟ ಬರುವವರೆಗೂ ಕಾಯುವ ಸ್ಥಿತಿ ನಿರ್ವಣವಾಗಿದೆ.

ಹೋಟೆಲ್ ಊಟ ಬೇಡ!

ಯಾವುದೇ ಕಾರಣಕ್ಕೂ ಹೋಟೆಲ್ ಆಹಾರ ಸೇವಿಸದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗೆ ಸೂಚಿಸಿದ್ದಾರೆ. ಬಹುತೇಕ ಹೋಟೆಲ್​ಗಳಲ್ಲಿ ಶುಚಿತ್ವ ಕಾಪಾಡಿಕೊಂಡಿರುವುದಿಲ್ಲ. ಇದರಿಂದ ಅನಾರೋಗ್ಯಕ್ಕೆ ಈಡಾಗಬಹುದು. ಈಗ ಕರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಸೂಕ್ಷ್ಮತೆಯಿಂದ ಆರೋಗ್ಯ ಕಾಪಾಡಿಕೊಳ್ಳಬೇಕು. ಹಾಗಾಗಿ ಹೋಟೆಲ್ ಊಟ ಸೇವಿಸದಂತೆ ನಿರ್ದೇಶಿಸಿದ್ದಾರೆ.

ಲಾಠಿ ಬಳಸದಿದ್ದರೆ ನಿಯಂತ್ರಣ ಕಷ್ಟ: ಕರೊನಾ ಭೀತಿಯ ನಡುವೆಯೂ ಹಗಲು ರಾತ್ರಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಪೊಲೀಸರ ಪರಿಸ್ಥಿತಿ ಜನರಿಗೆ ಅರಿವಾಗುತ್ತಿಲ್ಲ. ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೆ ಸಂಚರಿಸುತ್ತಾರೆ. ಲಾಕ್​ಡೌನ್ ಬಳಿಕ ಹೆಲ್ಮೆಟ್ ಧರಿಸುತ್ತಿಲ್ಲ. ಅಂತವರನ್ನು ನಿಯಂತ್ರಿಸುವುದೇ ಕಷ್ಟದ ಕೆಲಸವಾಗಿದೆ. ಇದರ ನಡುವೆಯೇ ಲಾಠಿ ಬಳಸಬೇಡಿ ಎಂದು ಆದೇಶಿಸಿದ್ದಾರೆ. ಇದು ಆತಂಕದ ವಿಚಾರ ಎಂದು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಸಬ್ ಇನ್​ಸ್ಪೆಕ್ಟರ್ ಅಳಲು ತೋಡಿಕೊಂಡಿದ್ದಾರೆ. ಮನೆಯಲ್ಲಿರುವಂತೆ ಹೇಳುವ ಪೊಲೀಸರ ಮೇಲೆ ರೇಗಾಡುತ್ತಾರೆ. ತಾಳ್ಮೆಯಿಂದ ಇದ್ದರು ಸಹ ಏಕವಚನದಲ್ಲಿ ಮಾತಾಡುವುದು, ಅವಾಚ್ಯವಾಗಿ ನಿಂದಿಸುತ್ತಾರೆ. ಇದರ ವಿರುದ್ಧ ತಿರುಗಿ ಬಿದ್ದರೆ ವಿಡಿಯೋ ಮಾಡಿ ಪೊಲೀಸರನ್ನೇ ತಪ್ಪಿತಸ್ಥರು ಎನ್ನುವಂತೆ ಬಿಂಬಿಸುತ್ತಾರೆ ಎಂದು ಕರ್ತವ್ಯದಲ್ಲಿ ತೊಡಗಿದ್ದ ಮುಖ್ಯಪೇದೆಯೊಬ್ಬರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net