ಪಾಂಡವಪುರ ಪುರಸಭೆ ಎದುರು ಅಡುಗೆ ತಯಾರಿಸಿ ಪ್ರತಿಭಟನೆ

ಪಾಂಡವಪುರ ಪುರಸಭೆ ಕಚೇರಿ ಮುಂಭಾಗ  ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಎಚ್.ಎನ್.ಮಂಜುನಾಥ್, ಜಗದೀಶ್, ಹೊನ್ನಗಿರಿಗೌಡ ಇತರರು ಇದ್ದರು.
ಪಾಂಡವಪುರ ಪುರಸಭೆ ಕಚೇರಿ ಮುಂಭಾಗ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಎಚ್.ಎನ್.ಮಂಜುನಾಥ್, ಜಗದೀಶ್, ಹೊನ್ನಗಿರಿಗೌಡ ಇತರರು ಇದ್ದರು.
Published on

ಪಾಂಡವಪುರ: ಇಲ್ಲಿನ ಪುರಸಭೆ ಫೈನಾನ್ಸ್ ಕಂಪನಿಯಂತಾಗಿದ್ದು, ಪ್ರತಿ ಕೆಲಸಕ್ಕೂ ಲಂಚ ಕೊಡಬೇಕಿದೆ ಎಂದು ಆರೋಪಿಸಿ ಸಾರ್ವಜನಿಕರು ಗುರುವಾರ ಕಚೇರಿ ಮುಂಭಾಗ ಅಡುಗೆ ತಯಾರಿಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಲಸ ಮಾಡಿಕೊಡಲು ಲಂಚ ಕೊಡಬೇಕು. ಲಂಚ ಕೊಡದೆ ಯಾವುದೇ ಕೆಲಸ ಆಗುತ್ತಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಪುರಸಭೆಯನ್ನು ಉಳಿಸಬೇಕಿದೆ. ಇಲ್ಲಿ ಅಕ್ರಮ ಖಾತೆ ಮಾಡಲಾಗುತ್ತಿದ್ದು, ಪುರಸಭೆ ಆಸ್ತಿ ಅನ್ಯರ ಪಾಲಾಗುತ್ತಿದ್ದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಪುರಸಭೆ ಉಳಿಸಿಕೊಳ್ಳಬೇ ಕಾದರೆ ಮುಖ್ಯಾಧಿಕಾರಿ ಹಠಾವೋ, ಪುರಸಭೆ ಬಚಾವೋ ಎಂಬ ಹೋರಾಟ ಅನಿವಾರ್ಯವಾಗಿದೆ. ಭಷ್ಟರ ವಿರುದ್ಧ ಕ್ರಮವಾಗದಿದ್ದರೆ ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಜಗದೀಶ್ ಮಾತನಾಡಿ, ಅಧಿಕಾರಿಗಳು ಪುರಸಭೆ ಆಸ್ತಿ ಉಳಿಸಿಕೊಳ್ಳುವ ಕೆಲಸ ಮಾಡುತ್ತಿಲ್ಲ. ನಿರ್ಮಲಾ ಕಾನ್ವೆಂಟ್ ಪಕ್ಕದ 24*400 ಹಾಗೂ ಡಿಸಿಸಿ ಬ್ಯಾಂಕ್ ಮುಂಭಾಗದ 11*400 ಅಳತೆಯ ನಿವೇಶನ ಪುರಸಭೆಗೆ ಸೇರಿದ್ದಾಗಿದೆ ಎಂದು ನ್ಯಾಯಾಲಯ ಈ ಹಿಂದೆಯೇ ತೀರ್ಪು ನೀಡಿದೆಯಾದರೂ ಕೋಟ್ಯಂತರ ರೂ.ಬೆಲೆ ಬಾಳುವ ಆಸ್ತಿ ಉಳಿಸಿಕೊಳ್ಳುತ್ತಿಲ್ಲ. ಪಟ್ಟಣದ ಹೃದಯ ಭಾಗದಲ್ಲಿರುವ ಈ ನಿವೇಶನದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದರೆ ಪುರಸಭೆಗೆ ಮಾಸಿಕ ಲಕ್ಷಾಂತರ ರೂ.ಆದಾಯ ಬರುತ್ತದೆ. ಆದರೆ, ಪುರಸಭೆಯ ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ಈ ಜಾಗವನ್ನು ವಶಕ್ಕೆ ಪಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪುರಸಭೆ ಹಿಂಭಾಗದಲ್ಲಿರುವ ನಿವೇಶನಕ್ಕೆ ಸಂಬಂಧಿಸಿದಂತೆ ಖಾಸಗಿ ವ್ಯಕ್ತಿಗಳ ನಡುವೆ ವ್ಯಾಜ್ಯ ನಡೆಯುತ್ತಿದೆ. ಆದರೂ, ನ್ಯಾಯಾಲಯಕ್ಕೆ ಗೌರವ ನೀಡದೆ ಈ ನಿವೇಶನವನ್ನು ಮೂರನೇ ವ್ಯಕ್ತಿಗಳಿಗೆ ಅಕ್ರಮ ಖಾತೆ ಮಾಡಿಕೊಡಲಾಗಿದೆ ಎಂದು ಆರೋಪಿಸಿದರು.

ಭ್ರಷ್ಟಾಚಾರದಲ್ಲಿ ತೊಡಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಮೂಲಕ ಭ್ರಷ್ಟಾಚಾರ ಮುಂದೆ ನಡೆಯದಂತೆ ತಪ್ಪಿಸಲು ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು. ಆಗ ಮಾತ್ರ ಭ್ರಷ್ಟಾಚಾರ ತಪ್ಪಿಸಲು ಸಾಧ್ಯ. ಇಲ್ಲವಾದರೆ ಇದು ಪುನರಾವರ್ತನೆ ಆಗುತ್ತದೆ. ರೈತ ಹೋರಾಟಗಾರರ ಮಗನಾದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಈ ಸಂಬಂಧ ಗಮನಹರಿಸಿ ಪುರಸಭೆಯನ್ನು ಉಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ರೈತಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜುನಾಥ್ ಮಾತನಾಡಿ, ಪುರಸಭೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳ ವರ್ತನೆಯಿಂದ ಪಾಂಡವಪುರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಲು ತಾರತಮ್ಯ ಎಸಗಲಾಗುತ್ತಿದೆ. ಈಗಿರುವ ಮುಖ್ಯಾಧಿಕಾರಿ ಸತೀಶ್ ಕುಮಾರ್ ಅವರು ಈ ಹಿಂದೆ ಕೆ.ಆರ್.ಪೇಟೆ ಪುರಸಭೆಯಲ್ಲಿ ಕೆಲಸ ಮಾಡುವಾಗ ಅವರ ವಿರುದ್ಧ ಹಲವಾರು ದೂರುಗಳು ಕೇಳಿ ಬಂದಿದೆ. ಇವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಇಂತಹ ಭ್ರಷ್ಟ ಅಧಿಕಾರಿಯನ್ನು ಸರ್ಕಾರ ಈ ಕೂಡಲೇ ಬೇರೆಡೆಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಯುಜಿಡಿ ಸಮಸ್ಯೆ, ಕಸ ವಿಲೇವಾರಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಆದರೆ ಅಧಿಕಾರಿಗಳು ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ಕಚೇರಿಯಲ್ಲಿ ಪ್ರತಿ ಕೆಲಸಕ್ಕೂ ಸಾರ್ವಜನಿಕರು ಲಂಚ ಕೊಡಬೇಕಾದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಹಠಾವೋ, ಪಾಂಡವಪುರ ಬಜಾವೋ ಧ್ಯೇಯದೊಂದಿಗೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಅಥವಾ ನಗರ ಯೋಜನಾಧಿಕಾರಿಗಳು ಸ್ಥಳಕ್ಕೆ ಬಂದು ಕ್ರಮದ ಭರವಸೆ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹೊನ್ನಗಿರಿಗೌಡ, ಮುಖಂಡರಾದ ಹಿರೇಮರಳಿ ದೊರೆಸ್ವಾಮಿ, ಶ್ರೀನಿವಾಸ್, ವಿಷ್ಣುವಿಠಲ, ಬಿರೇಶೆಟ್ಟಹಳ್ಳಿ ಬಾಲಗಂಗಾಧರ, ಹಿರೋಡೆ ಬೀದಿ ಕೇಶವ, ಶ್ರೀನಿವಾಸ ನಾಯಕ, ವಿ.ಸಿ ಕಾಲನಿ ಆನಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net