ಕುಕ್ಕರ್ ಇನ್ನೂ ಚೆನ್ನಾಗಿದೆಯಾ..? - ರಮೇಶ ಜಾರಕಿಹೊಳಿ

Ramesh_web
Published on

ಬೆಳಗಾವಿ: 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ..? ಈಗ ‘ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ’ ತರಹ ಆಗುತ್ತಿದೆ… ಹೀಗೆಂದು ಜಲಸಂಪನ್ಮೂಲ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಂಗಳವಾರ ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕದ ಉದ್ಘಾಟನೆ ವೇಳೆ ಮಾತನಾಡಿ, ಕಳೆದ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಗೆಲುವಿಗಾಗಿ ನನ್ನ ಹಣದಲ್ಲಿಯೇ ಕುಕ್ಕರ್‌ಗಳನ್ನು ಹಂಚಿಕೆ ಮಾಡಿ ಗೆಲ್ಲಿಸಲಾಗಿತ್ತು. ಇದರಿಂದ ಬಿಜೆಪಿ ಅಭ್ಯರ್ಥಿ ಮಾಜಿ
ಶಾಸಕ ಸಂಜಯ ಪಾಟೀಲ ಅವರಿಗೆ ಅನ್ಯಾಯವಾಗಿದೆ ಎಂದರು ಅವತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳ ಗೆಲುವಿಗಾಗಿ ಎಲ್ಲ ಕ್ಷೇತ್ರಗಳಲ್ಲಿ ನಾನು ಹಗಲಿರುಳು ಓಡಾಡಿ ಶ್ರಮಿಸಿದ್ದೇನೆ.

ಹೀಗಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ ಇತಿಹಾಸ ಸೃಷ್ಟಿಸಬೇಕಿದೆ. ಇದು ಕೇವಲ ನನ್ನಿಂದ ಅಥವಾ ಸುರೇಶ ಅಂಗಡಿ ಅವರಿಂದ ಸಾಧ್ಯವಿಲ್ಲ. ಪಕ್ಷದ ಕಾರ್ಯಕರ್ತರು ಈ ವಿಚಾರವಾಗಿ ಸಂಘಟಿತರಾಗ ಬೇಕು ಎಂದು ಹೇಳಿದರು. ಹೆಬ್ಬಾಳ್ಕರ್‌ಗೆ ಹಣದ ಮದವಿದೆ. ಅವರು ಎಷ್ಟು ದುಡ್ಡು ಕೊಡುತ್ತಾರೋ. ಅದಕ್ಕಿಂತ ಹೆಚ್ಚು ಹಣವನ್ನು ನಾನು ಸಾಲ ಮಾಡಿಯಾದರೂ ತಂದು ಖರ್ಚು ಮಾಡುತ್ತೇನೆ. ನಮ್ಮದು ಬೆವರು ಹರಿಸಿ ಗಳಿಸಿದ ಹಣ. ಇದು ಅಹಂಕಾರದ ಮಾತಲ್ಲ ಎಂದು ರಮೇಶ ಜಾರಕಿಹೊಳಿ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net