

ಮೈಸೂರು: ಕಳೆದ ವರುಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕುಕ್ಕರ್ ಹಾಗೂ ಇಸ್ತ್ರಿಪೆಟ್ಟಿಗೆ ಹಂಚಿಕೆ ಮಾಡಿಲ್ಲ ಎಂದು ಮಾಜಿ ಶಾಸಕ, ವರುಣ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೇಳಿರುವುದೇ ಒಂದು ಮಾಧ್ಯಮಗಳು ತೋರಿಸುತ್ತಿರುವುದೇ ಇನ್ನೊಂದು. ‘ಸಿದ್ದರಾಮಯ್ಯ ಅವರು ಚುನಾವಣೆಗಾಗಿ ಕುಕ್ಕರ್ ಕೊಟ್ಟಿದ್ದಾರೆ’ ಎಂದು ನಾನು ಎಲ್ಲೂ ಹೇಳಿಲ್ಲ ಎಂದು ಹೇಳಿದರು.
ಮಾತನಾಡುವ ಸಂದರ್ಭದಲ್ಲಿ ನಾನು ಸರಿಯಾಗಿ ಮಾತನಾಡದೇ ಇರಬಹುದು. ನನ್ನ ಹೇಳಿಕೆ ಆ ರೀತಿಯ ಅರ್ಥವನ್ನೂ ಕೊಟ್ಟಿರಬಹುದು. ಆದರೆ, ಈ ಘಟನೆ ನಡೆದಿರೋದು ಚುನಾವಣೆ ನೀತಿ ಸಂಹಿತೆಗೂ ಮುಂಚೆ ಎಂದು ತಿಳಿಸಿದರು.
ಜ.26ರಂದು ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ವಿತರಣೆ ಮಾಡಲಾಗಿದೆ. ನನ್ನ ತಂದೆ ಸ್ವತಃ ಕೈಯಿಂದ ಕೂಡ ಕೊಟ್ಟಿಲ್ಲ. ಆದರೆ, ಮಾಧ್ಯಮಗಳಲ್ಲಿ ಚುನಾವಣೆಗಾಗಿ ಹಂಚಿಕೆ ಮಾಡಲಾಗಿದೆ ಎಂದು ಬರುತ್ತಿದೆ. ಆ ಕಾರ್ಯಕ್ರಮದ ವಿಡಿಯೋ, ಫೋಟೊಗಳೂ ಇವೆ. ನಮ್ಮ ತಂದೆಯವರ ಕೈಯಿಂದ ದುಡ್ಡುಕೊಟ್ಟು ಎಲ್ಲಿಯೂ ಹಂಚಿಲ್ಲ ಎಂದು ಸ್ಪಷ್ಟಪಡಿಸಿದರು.