ಪುರೋಹಿತರಿಂದ ಧರ್ಮ ಸಂರಕ್ಷಣೆ ಸಾಧ್ಯ: ಪುತ್ತಿಗೆ ಶ್ರೀ

udp-26-putttige
Published on

ಉಡುಪಿ: ಸಮಾಜದಲ್ಲಿ ಅನೇಕ ಸಮಸ್ಯೆಗಳು ಎದುರಾದಾಗ ಪುರೋಹಿತರು ಮಾರ್ಗದರ್ಶನ ನೀಡುತ್ತಿದ್ದು, ಜನರ ಸಂಕಷ್ಟವನ್ನು ಪರಿಹರಿಸುತ್ತಿದ್ದಾರೆ. ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರ ಪಾತ್ರ ಬಹುಮುಖ್ಯವಾಗಿದ್ದು, ಪೌರೋಹಿತ್ಯ ವೃತ್ತಿಯ ಸಂರಕ್ಷಣೆ, ವೈದಿಕ ಧರ್ಮದ ಪ್ರಚಾರಕ್ಕಾಗಿ ಹೆತ್ತವರು ಮಕ್ಕಳನ್ನು ವಿದ್ಯಾಪಿಠಕ್ಕೆ ಸೇರಿಸಬೇಕು ಎಂದು ಪರ್ಯಾಯ ಪುತ್ತಿಗೆ ಮಠದ ಪೀಠಾಧಿಪತಿ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರು ಕರೆನೀಡಿದರು.

ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಶ್ರೀಪುತ್ತಿಗೆ ವಿದ್ಯಾಪಿಠದ 37ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅನುಗ್ರಹ ಸಂದೇಶ ನೀಡಿದರು.
ಇಂದಿನ ಯಾಂತ್ರಿಕ ವಾತಾವರಣದ ಪ್ರಭಾವದಲ್ಲಿ ಎಲ್ಲರೂ ಇಂಜಿನಿಯರಿಂಗ್​ , ಮೆಡಿಕಲ್​ ಮುಂತಾದ ಲೌಕಿಕ ಶಿಕ್ಷಣವನ್ನು ಬಯಸುತ್ತಿದ್ದಾರೆ. ಆದರೆ ಸ್ವಸ್ತಿ ಪ್ರಜಾಭ್ಯ ಎಂಬುದಾಗಿ ವಿಶ್ವದ ಕ್ಷೇಮವನ್ನು ನಿಸ್ವಾರ್ಥವಾಗಿ ಬಯಸುವ ಪೌರೋಹಿತ್ಯ ವೃತ್ತಿಯೂ ಅತೀ ಅಗತ್ಯವಾಗಿ ಬೇಕಾಗಿದ್ದು, ಇಂತಹ ಪುರೋಹಿತರ ನಿಮಾರ್ಣದ ಪ್ರಧಾನ ಆಶಯದೊಂದಿಗೆ ಶ್ರೀ ಪುತ್ತಿಗೆ ವಿದ್ಯಾಪಿಠವನ್ನು ಸ್ಥಾಪನೆ ಮಾಡಲಾಗಿತ್ತು. ಈಗ ದೇಶವಿದೇಶಗಳ ನೂರಾರು ಶಾಖೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಧರ್ಮ ಪ್ರಚಾರದಲ್ಲಿ ನಿರತರಾಗಿರುವುದು ಸಂತಸ ತಂದಿದೆ ಎಂದರು.

ಶ್ರೀಕಣ್ವ ಮಠದ ಪೀಠಾಧಿಪತಿ ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದರು ಮುಖ್ಯ ಅತಿಥಿಗಳಾಗಿದ್ದರು. ಶ್ರೀ ಪುತ್ತಿಗೆ ಮಠದ ಕಿರಿಯಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಮಠದ ಕಾರ್ಯದರ್ಶಿ ಪ್ರಸನ್ನಾಚಾರ್ಯ ಕಣ್ವ ಮಠಾಧೀಶರಿಗೆ ಪರ್ಯಾಯ ಮಠದಿಂದ ಮಾಲಿಕೆ ಮಂಗಳಾರತಿ ಗೌರವ ಅರ್ಪಿಸಿದರು. ಈ ಸಂದರ್ಭದಲ್ಲಿ ಕದ್ರಿ ದೇವಸ್ಥಾನದ ಅರ್ಚಕ ವೇದಮೂರ್ತಿ ಪ್ರಭಾಕರ ಅಡಿಗ ಸಂಪಾದಿಸಿರುವ "ಉದಕ ಶಾಂತಿ* ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಶತಾವಧಾನಿ ರಾಮನಾಥ ಆಚಾರ್ಯ, ಪ್ರಕಾಶಾಚಾರ್ಯ ಮುಂಬಯಿ , ರಾಮದಾಸ ಉಪಾಧ್ಯಾಯ ಮುಂಬೈ, ರಾಜೇಶ್​ ಭಟ್​ ಮುಂಬೈ, ಪ್ರವಿಣಾಚಾರ್ಯ , ಕುಂಭಾಸಿ ಸೂರ್ಯನಾರಾಯಣ ಉಪಾಧ್ಯಾಯರು , ಶ್ರೀನಿವಾಸಾಚಾರ್ಯ ಹೊನ್ನೆದಿಬ್ಬ ಬೆಳಗಾಂ , ವಿಜಯಸಿಂಹಾಚಾರ್ಯ ತೋಟಂತಿಲ್ಲಾಯ, ಶ್ರೀಪತಿ ಆಚಾರ್ಯ , ಪಾಡಿಗಾರು, ಪಂಜ ಭಾಸ್ಕರ್​ ಭಟ್​ , ಕೇಂಜ ಶ್ರೀಧರ ತಂತ್ರಿ, ಶ್ರೀಧರ ಉಪಾಧ್ಯಾಯ ಕುಂಭಾಶಿ, ಶಿಕ್ಷಣ ತಜ್ಞ ರೋಹಿತ್​ ಚಕ್ರತಿರ್ಥ ಭಾಗವಹಿಸಿದ್ದರು. ಪುತ್ತಿಗೆ ವಿದ್ಯಾಪಿಠದ ಪ್ರಾಚಾರ್ಯ ಶ್ರೀನಿಧಿ ಆಚಾರ್ಯ ಸ್ವಾಗತಿಸಿದರು. ಡಾ.ಬಿ.ಗೋಪಾಲಾಚಾರ್ಯ ಪುತ್ತಿಗೆ ವಿದ್ಯಾಪಿಠದ ಸಾಧನೆಗಳ ಪರಿಚಯಿಸಿದರು. ವಿದ್ವಾನ್​ ಯೋಗೀಂದ್ರ ಭಟ್​ ಕಾರ್ಯಕ್ರಮವನ್ನು ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net