ನ.20ರಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಅಕಾಡೆಮಿ ಘಟಿಕೋತ್ಸವ

IMG-20231118-WA0035
Published on

ಮೈಸೂರು: ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 14ನೇ ಘಟಿಕೋತ್ಸವ ನ.20ರಂದು ನಡೆಯಲಿದೆ. 2,546 ವಿದ್ಯಾರ್ಥಿಗಳು ವಿವಿಧ ಪದವಿ ಪಡೆದುಕೊಳ್ಳಲಿದ್ದಾರೆ.

ಅಂದು ಬೆಳಗ್ಗೆ 11ಕ್ಕೆ ಸಂಸ್ಥೆ ಆವರಣದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಘಟಿಕೋತ್ಸವ ನಡೆಯಲಿದೆ. ವಿವಿ ಧನಸಹಾಯ ಆಯೋಗದ ಅಧ್ಯಕ್ಷ ಪ್ರೊ.ಎಂ. ಜಗದೀಶ್‌ಕುಮಾರ್ ಘಟಿಕೋತ್ಸವ ಭಾಷಣ ಮಾಡಿ, ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ಪದವಿ ವಿತರಿಸಲಿದ್ದಾರೆ. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ವಿವಿಯ ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಸಚಿವ ಡಾ.ಬಿ.ಮಂಜುನಾಥ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಸುಧೀಂದ್ರ ಭಟ್ ಇತರರು ಭಾಗವಹಿಸಲಿದ್ದಾರೆ ಎಂದು ಕುಲಸಚಿವ ಸುರೀಂದರ್ ಸಿಂಗ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


ಮಹಿಳೆಯರೇ ಹೆಚ್ಚು: ಪದವಿ ಪಡೆಯುತ್ತಿರುವವರ ಪೈಕಿ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ವಿವಿಧ ವಿಷಯಗಳಲ್ಲಿ 1,022 ಪುರುಷರು, 1,524 ಮಹಿಳಾ ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಈ ಪೈಕಿ 49 ವಿದ್ಯಾರ್ಥಿಗಳಿಗೆ ಪಿಎಚ್‌ಡಿ, 55 ವಿದ್ಯಾರ್ಥಿಗಳಿಗೆ 84 ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಶೈಕ್ಷಣಿಕ ಸಾಧನೆ: ಜೆಎಸ್‌ಎಸ್ ಎಎಚ್‌ಎಆರ್ ಶೈಕ್ಷಣಿಕ ಮತ್ತು ಸಂಶೋಧನಾ ವಲಯದಲ್ಲಿ ಉತ್ತಮ ಸಾಧನೆಗೆ ಟೈಮ್ಸ್ ಹೈಯರ್ ಎಜುಕೇಷನ್ ವಿಶ್ವ ವಿವಿ ಶ್ರೇಯಾಂಕ-2023ರಲ್ಲಿ 351-400 ಶ್ರೇಯಾಂಕ ಪಟ್ಟಿಯಲ್ಲಿದೆ.

ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಏಷ್ಯಾ ಶ್ರೇಯಾಂಕ 2023ರಲ್ಲಿ, 68ನೇ ಸ್ಥಾನ ಗಳಿಸಿದ್ದು, ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ವಿಷಯವಾರು ಶ್ರೇಯಾಂಕ 2023ರಲ್ಲಿ, ಕ್ಲಿನಕಲ್ ಅಂಡ್ ಹೆಲ್ತ್ ವಿಷಯದಲ್ಲಿ ವಿಶ್ವದ 126-150 ಶ್ರೇಯಾಂಕ ಪಟ್ಟಿಯಲ್ಲಿದ್ದು, ಭಾರತದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಯುವ ವಿವಿ ಶ್ರೇಯಾಂಕ-2023ರಲ್ಲಿ ಜಾಗತಿಕವಾಗಿ 79ನೇ ಸ್ಥಾನದಲ್ಲಿದ್ದು, ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ. ಇಂಪ್ಯಾಕ್ಟ್ ಶ್ರೇಯಾಂಕ-2023ರಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳು-3 (ಎಸ್ಡಿಜಿ-3), ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ ವಿಭಾಗದಲ್ಲಿ ಜಾಗತಿಕವಾಗಿ 16ನೇ ಶ್ರೇಯಾಂಕ ಗಳಿಸಿದೆ. ಭಾರತದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕ್ವಾಕರೇಲಿ ಸೈಮಂಡ್ಸ್ (ಕ್ಯು.ಎಸ್) ಏಷ್ಯಾ ವಿವಿ ಶ್ರೇಯಾಂಕ-2023ರಲ್ಲಿ ಜೆಎಸ್‌ಎಸ್ ಎಎಚ್‌ಎಆರ್ ಏಷ್ಯಾ ಪ್ರಾಂತದ ಮೊದಲ 500ರಲ್ಲಿದ್ದು 301-350 ಶ್ರೇಯಾಂಕಪಟ್ಟಿಯಲ್ಲಿದೆ. ವಿಷಯಾಧಾರಿತ ಕ್ಯು.ಎಸ್.ವಿಶ್ವ ವಿವಿ ಶ್ರೇಯಾಂಕ ಪಟ್ಟಿಯಲ್ಲಿ, ಫಾರ್ಮಸಿ ಮತ್ತು ಫಾರ್ಮಕಾಲಜಿ ವಿಷಯದಲ್ಲಿ 101-150 ಶ್ರೇಯಾಂಕದಲ್ಲಿದ್ದು, ಭಾರತದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು-2023ರಲ್ಲಿ 34ನೇ ಸ್ಥಾನ ಪಡೆದಿದ್ದು, ಸತತವಾಗಿ ಕಳೆದ ಎಂಟು ವರ್ಷಗಳಿಂದಲೂ ದೇಶದ 50 ಉನ್ನತ ವಿವಿಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಫಾರ್ಮಸಿ ವಿಭಾಗದಲ್ಲಿ ಊಟಿ ಜೆಎಸ್‌ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯ 4ನೇ ಮತ್ತು ಮೈಸೂರು ಜೆಎಸ್‌ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯ 7ನೇ ಸ್ಥಾನಗಳಿಸಿದೆ. ದೇಶದ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪೈಕಿ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜು 11ನೇ ಸ್ಥಾನಗಳಿಸಿದೆ. ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪೈಕಿ ಜೆಎಸ್‌ಎಸ್ ವೈದ್ಯಕೀಯ ಕಾಲೇಜು 37ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಕುಲಸಚಿವ ಡಾ.ಬಿ.ಮಂಜುನಾಥ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಆರ್.ಸುಧೀಂದ್ರ ಭಟ್, ವಿವಿಧ ವಿಭಾಗಗಳ ಡೀನ್‌ಗಳಾದ ಡಾ. ಎಚ್.ಕೆ.ಮಮತಾ, ಡಾ.ವಿಶಾಲಕುಮಾರ್ ಗುಪ್ತ, ಡಾ.ರವೀಶ್, ಡಾ.ಪ್ರಶಾಂತ್, ಡಾ.ದಾಕ್ಷಾಯಿಣಿ, ಡಾ.ಪ್ರಮೋದ್‌ಕುಮಾರ್, ಪ್ರೊ.ರವೀಶ್ ಇದ್ದರು.

2023ನೇ ಸಾಲಿನಲ್ಲಿ 42 ಬಾಹ್ಯ ಸಂಶೋಧನಾ ಯೋಜನೆಗಳಿಗಾಗಿ 12.6 ಕೋಟಿ ರೂ. ಅನುದಾನ ವಿವಿಧ ಹಣಕಾಸು ಸಂಸ್ಥೆಗಳಿಂದ ಮಂಜೂರಾಗಿದೆ. ಪ್ರಸಕ್ತ ವರ್ಷ 16 ಹಕ್ಕು ಸ್ವಾಮ್ಯಗಳಿಗೆ ಅರ್ಜಿ ಸಲ್ಲಿಸಿ ಪ್ರಕಟಿಸಿದ್ದು, 7 ಹಕ್ಕು ಸ್ವಾಮ್ಯಗಳು ಮಂಜೂರಾಗಿವೆ. ಭವಿಷ್ಯದಲ್ಲಿ ಅಮೆರಿಕ, ಆಸ್ಟ್ರೇಲಿಯಾ ವಿವಿಗಳ ಸಹಯೋಗದಲ್ಲಿ ಸಂಶೋಧನೆ ಕೈಗೊಳ್ಳುವ ಯೋಜನೆ ಇದೆ. ಬೆಂಗಳೂರಿನ ಜೆಎಸ್‌ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್‌ನಲ್ಲಿ ಕ್ಯಾಂಪಸ್ ಕೇಂದ್ರ ಪ್ರಾರಂಭಿಸಲಾಗುವುದು.ಸುರೀಂದರ್ ಸಿಂಗ್ ಕುಲಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net