ನರ್ಸಿಂಗ್​ ವೃತ್ತಿಯಲ್ಲಿ ಬದ್ಧತೆ ಮುಖ್ಯ: ಡಾ.ಶರತ್​ ರಾವ್​

udp-9-mission hospital
Published on

ಉಡುಪಿ: ನರ್ಸಿಂಗ್​ ಎಂಬುದು ಕೇವಲ ವೃತ್ತಿಯಲ್ಲ. ಈ ಸೇವೆಯು ಬದುಕನ್ನೇ ಬದಲಾಯಿಸ ಬಹುದಾದ ಕ್ಷೇತ್ರವಾಗಿದೆ. ತಮ್ಮ ವೃತ್ತಿಯಲ್ಲಿ ಸಹಾನುಭೂತಿ, ಸಮಗ್ರತೆ ಹಾಗೂ ಬದ್ಧತೆಯಂತಹ ವೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಣಿಪಾಲ ಮಾಹೆ ಪ್ರೊ. ವೈಸ್​ ಚಾನ್ಸಲೆರ್​ ಡಾ.ಶರತ್​ ರಾವ್​ ಹೇಳಿದ್ದಾರೆ.

ಶನಿವಾರ ಸಿಎಸ್​ಐ ಲೋಂಬಾರ್ಡ್​ ಮೆಮೋರಿಯಲ್​(ಮಿಷನ್​) ಆಸ್ಪತ್ರೆ ಸಮೂಹ ಸಂಸ್ಥೆಯ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೌಶಲ್ಯ ಮತ್ತು ಜ್ಞಾನವು ವಿದ್ಯಾರ್ಥಿಗಳ ಉನ್ನತಿ ಕಾರಣವಾಗುತ್ತದೆ. ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಸಾಕಷ್ಟ್ಟು ಸವಾಲುಗಳನ್ನು ಎದುರಿಸಿ ಪಡೆದಿದ್ದಾರೆ. ಅದೇ ರೀತಿ ಮುಂದೆ ಇನ್ನಷು ಸವಾಲುಗಳನ್ನು ಈ ಜಗತ್ತಿನಲ್ಲಿ ಎದುರಿಸಬೇಕಾಗಿದೆ ಎಂದು ಅವರು ತಿಳಿಸಿದರು.

ಸಿಎಸ್​ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತದ ಬಿಷಪ್​ ರೈಟ್​ ರೆವೆರೆಂಡ್​ ಹೆಮಚಂದ್ರ ಕುಮಾರ್​ ಮಾತನಾಡಿ, ಸೈನಿಕರು, ರೈತರು ಮತ್ತು ದಾದಿಯರು, ವೈದ್ಯರು ಶ್ರಮಪಟ್ಟು ಕೆಲಸ ಮಾಡುವವರು. ಕಲಿಕಾ ಅವಧಿಯಲ್ಲಿ ಪಡೆದ ತರಬೇತಿಯನ್ನು ಸಮಾಜ ಒಳಿತಿಗಾಗಿ, ಅಸ್ವಸ್ಥರ ನೋವಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆಗೆ ಬಳಸಿಕೊಳ್ಳಬೇಕು. ಇಂತಹ ಅತ್ಯುತ್ತಮ ಸಂಸ್ಥೆಯಿಂದ ಪಡೆದ ಜ್ಞಾನವು ದೊಡ್ಡ ಸಂಪತ್ತು ಆಗಿದೆ ಎಂದರು.

ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್​ ಜತ್ತನ್ನ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮೆರಿಟ್​ ಅವಾರ್ಡ್​ ಪ್ರದಾನ ಮಾಡಲಾಯಿತು. ರೆ.ಐವನ್​ ಡಿ ಸೋನ್ಸ್​ ಪ್ರಾರ್ಥನೆ ನೆರವೇರಿಸಿದರು. ಮಾಲತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ.ಸುಜಾ ಕರ್ಕಡ ವಾರ್ಷಿಕ ವರದಿ ವಾಚಿಸಿದರು. ಡಾ.ಬಿ.ಎನ್​.ಪೆರಲಾಯ ಸ್ವಾಗತಿಸಿದರು. ಡಾ.ಸ್ವೀನಾ ಪ್ರಮೋದ್​ ಅತಿಥಿಗಳ ಪರಿಚಯ ಮಾಡಿದರು. ಡಾ.ರೋಶನ್​ ಪಾಯಸ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net