

ಮಂಡ್ಯ: ಭಾರತ ಮೊದಲಿನಿಂದಲೂ ಕೌಶಲತೆಯಲ್ಲಿ ಉನ್ನತ ಸಾಧನೆ ಮಾಡಿದೆ. ಆದ್ದರಿಂದ ವಿದ್ಯಾರ್ಥಿಗಳು ಕೌಶಲತೆ ಬೆಳೆಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಎಸ್.ಬಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ಹೊರವಲಯದ ಜ್ಞಾನಸಾಗರ ಕ್ಯಾಂಪಸ್‌ನ ಎಸ್‌ಟಿಎನ್ ಸಭಾಂಗಣದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಎಸ್‌ಬಿ ಎಜುಕೇಷನ್ ಟ್ರಸ್ಟ್, ತಾವರೆಗೆರೆ ಕೈಗಾರಿಕಾ ತರಬೇತಿ ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 2023ನೇ ಸಾಲಿನ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಐಟಿಐ ಕಲಿತ್ತಿರುವವರಲ್ಲಿ ಕೌಶಲತೆ, ಬುದ್ದಿವಂತಿಕೆ ಹಾಗೂ ಚಾಣಾಕ್ಷತೆ ಇಂಜಿನಿಯರ್ ಹಾಗೂ ಎಂಟಿಐ ಮಾಡಿರುವವರಿಗೂ ಇರಲ್ಲ. ಐಟಿಐ ಕೋರ್ಸ್ ಪೂರ್ಣಗೊಳಿಸಿದವರಿಗೆ ಉದ್ಯೋಗ ಅವಕಾಶ ದೊರಕುವುದರಲ್ಲಿ ಯಾವುದೇ ಅನುಮಾನ ಇಲ್ಲ. ಐಟಿಐ ಮಾಡಿರುವವರಲ್ಲಿ ಅಹಂ ಎನ್ನುವುದು ಕಡಿಮೆ. ಅವರಲ್ಲಿ ಕಲಿಯುವ ಉತ್ಸಾಹ, ಸಾಧಿಸುವ ಚಲ ಇರುತ್ತದೆ. ಕೌಶಲತೆಯಲ್ಲಿ ಇಡೀ ಪ್ರಪಂಚದಲ್ಲಿ ಭಾರತದ ಮಕ್ಕಳು ಬುದ್ಧಿವಂತರು ಎಂದು ಸಾಬೀತು ಮಾಡಿದ್ದಾರೆ. ಕೌಶಲತೆ ವೃತ್ತಿ ಮಾಡುವವರು ವಿದೇಶದಲ್ಲಿ ಹೋಗಿ ತಮ್ಮ ಸಾಮರ್ಥ್ಯ ತೋರಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಆರ್.ನಾಗಾನಂದ, ಕೈಗಾರಿಕಾ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಎಲ್ಲ ಕಡೆ ಉತ್ತೇಜನವಿದೆ. ಇತ್ತೀಚಿನ ದಿನಗಳಲ್ಲಿ ಇಸ್ರೋ ಉಡಾವಣೆಯಲ್ಲಿ ಕೈಗಾರಿಕಾ ತರಬೇತಿ ಪಡೆದವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಎಸ್.ಬಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದರು. ಪಂಚಮುಖಿ ನ್ಯೂಟ್ರಿಯೆಂಟ್ಸ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಪುಟ್ಟರಾಜು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಅಧಿಕಾರಿ ಸಿ.ಆರ್.ನಾಗರಾಜು, ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜು ಶೈಕ್ಷಣಿಕ ಪಾಲುದಾರರಾದ ಚೇತನ್‌ಕೃಷ್ಣ, ಎಂ.ಆರ್.ಮಂಜು, ಪ್ರಾಂಶುಪಾಲ ಎಚ್.ಎಂ.ಶ್ರೀನಿವಾಸ್, ಆಡಳಿತಾಧಿಕಾರಿ ತನ್ಮಯ್, ತಾವರೆಗೆರೆ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲ ಎಂ.ಸಿ.ಪ್ರವೀಣ್‌ಕುಮಾರ್ ಇತರರಿದ್ದರು.
ಇದೇ ಸಂದರ್ಭದಲ್ಲಿ ಕೈಗಾರಿಕಾ ತರಬೇತಿ ಪಡೆದ 65 ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಣೆ ಮಾಡಲಾಯಿತು.