ಆದಿವಾಸಿ ಸಮುದಾಯದ ಒಬ್ಬರನ್ನು ಎಂಎಲ್ಸಿ ಮಾಡಲು ಮನವೊಲಿಸಿ

DR S SRIKANTH DEED
Published on

ಹುಣಸೂರು: ವಿಧಾನ ಪರಿಷತ್‌ಗೆ ಪರಿಶಿಷ್ಟ ಪಂಗಡದ ಕೋಟಾದಡಿ ಆದಿವಾಸಿ ಸಮುದಾಯದವರೊಬ್ಬರನ್ನು ನಾಮಕರಣ ಮಾಡಲು ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕೀಹೋಳಿ ಅವರು ಮುಖ್ಯಮಂತ್ರಿಗೆ ಮನವೊಲಿಸಬೇಕೆಂದು ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ 30 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ವಾಲ್ಮೀಕಿ ನಾಯಕ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಕೋಟಾದಡಿ ಇಬ್ಬರು ಸಚಿವರು ಮತ್ತು 15 ಶಾಸಕರನ್ನು ಪಡೆದಿದ್ದಾರೆ. ಆದರೆ 10 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಆದಿವಾಸಿ ಸಮುದಾಯಕ್ಕೆ ಒಬ್ಬನೇ ಒಬ್ಬ ಜನಪ್ರತಿನಿಧಿ ಇಲ್ಲ. ಅತ್ಯಂತ ದುಸ್ಥಿತಿಯಲ್ಲಿ ಜೀವನ ನಡೆಸುತ್ತಿರುವ ಆದಿವಾಸಿಗಳ ಸಮಗ್ರ ಅಭಿವೃದ್ಧಿಗೆ ರಾಜಕೀಯ ಅಧಿಕಾರದ ಅಗತ್ಯತೆ ಇದ್ದು, ಈ ಕುರಿತು ಪರಿಶಿಷ್ಟ ಪಂಗಡದ ಪ್ರಭಾವಿ ನಾಯಕರಾಗಿ ತಾವು ಉಪಕ್ರಮಗಳನ್ನು ಕೈಗೊಳ್ಳುವ ಮೂಲಕ ಆದಿವಾಸಿಗಳ ಬೆಂಬಲಕ್ಕೆ ನಿಲ್ಲಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ಆದಿವಾಸಿಗಳ ಜ್ವಲಂತ ಸಮಸ್ಯೆಗಳಾದ ಆದಿವಾಸಿ ಅಭಿವೃದ್ಧಿ ಮಂಡಳಿ ರಚನೆ, ನಿಗಮ ರಚನೆ, ಒಳಮೀಸಲಾತಿ ಜಾರಿ, ಅರಣ್ಯ ಹಕ್ಕು ಕಾಯ್ದೆ ಅನ್ವಯ ಆದಿವಾಸಿ ಪರಂಪರೆಯ ಅರಣ್ಯಗಳಿಗೆ ಹಕ್ಕುಪತ್ರ ವಿತರಣೆ, ಕಾಡಿನಿಂದ ಹೊರಹಾಕಲ್ಪಟ್ಟ 3418 ಕುಟುಂಬಗಳಿಗೆ ಅಸ್ಸಾದಿ ವರದಿ ಶಿಫಾರಸುಗಳನ್ವಯ ಪುನರ್ವಸತಿ, ಆದಿವಾಸಿ ಪ್ರದೇಶಗಳನ್ನು 5ನೇ ಅನುಸೂಚಿತ ಪ್ರದೇಶದಡಿ ಘೋಷಿಸಿ ಆದಿವಾಸಿ ಕೃಷಿ ಭೂಮಿಗೆ ಪಕ್ಕಪೋಡು, ಆಶ್ರಮ ಶಾಲೆ ಗುಣಮಟ್ಟ ಶಿಕ್ಷಣ ನೀಡುವುದು ಮುಂತಾದ ಕಾರ್ಯಗಳು ಆಗಬೇಕಿದ್ದು, ಆದಿವಾಸಿ ಸಮುದಾಯವೂ ಇದರಲ್ಲಿ ಪಾಲ್ಗೊಳ್ಳುವಂತಾಗಲು ಸಹಕರಿಸಿರೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net