

ಕೆ.ಎಂ.ದೊಡ್ಡಿ: ಸರಕಾರಿ ಶಾಲೆ ಅಭಿವೃದ್ಧಿಗೆ ಶಿಕ್ಷಕರು, ಪಾಲಕರು ಮತ್ತು ಹಳೆಯ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯ ಎಂದು ಬಿಇಒ ಎಸ್.ಬಿ. ಧನಂಜಯ್ ತಿಳಿಸಿದರು.
ಸಮೀಪದ ಕಾರ್ಕಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಿದ್ದ ನಮ್ಮ ಶಾಲೆ-ನಮ್ಮ ಜವಾಬ್ದಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಗುಣ ಮಟ್ಟದ ಶಿಕ್ಷಣ ನೀಡುತಿದ್ದು, ಅದರ ಬಗ್ಗೆ ಗ್ರಾಮದಲ್ಲಿ ಜನರಿಗೆ ಹಿರಿಯ ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಡಬೇಕು ಎಂದರು.
ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರ ಹಲವು ವಿಶೆೇಷ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಬಗ್ಗೆ ಜನರಿಗೆ ಶಿಕ್ಷಕರು ತಿಳಿಸಿ ಗುಣಮಟ್ಟದ ಶಿಕ್ಷಣದ ಬಗ್ಗೆ ಪಾಲಕರ ಮನವೊಲಿಸಿ ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪ್ರೇರೆಪಿಸಬೇಕು ಎಂದು ಕಿವಿಮಾತು ಹೇಳಿದರು.
ಹಿರಿಯ ವಿದ್ಯಾರ್ಥಿ ಮತ್ತು ಗ್ರಾಪಂ ಸದಸ್ಯ ಮಹೇಶ್ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವಂತಹವರು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶ-ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಹೆಚ್ಚಾಗಿ ದಾಖಲಿಸುವ ಮೂಲಕ ಮಾದರಿ ಶಾಲೆಗಳನ್ನಾಗಿ ಮಾರ್ಪಡು ಮಾಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಶಿವಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಎಂ ಪೋಷಣ್ ಶಿಕ್ಷಣಾಧಿಕಾರಿ ಲೋಕೇಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಶಿಕ್ಷಣ ಸಂಯೋಜಕ ಲೋಕೇಶ್, ಅಂಗನವಾಡಿ ಮೇಲ್ವಿಚಾರಕಿ ಉಮಾ ದೇವರಾಜು, ಸಮೂಹ ಸಂಪನ್ಮೂಲ ವ್ಯಕ್ತಿ ನಂದೀಶ್, ಪಿಡಿಒ ಅಶ್ವಿನಿ, ಹಿರಿಯ ವಿದ್ಯಾರ್ಥಿ ಬಳಗದ ನಂದೀಶ್, ಅಭಿಷೇಕ್, ಸುನೀಲ್, ಪ್ರದೀಪ್, ಎಸ್‌ಡಿಎಂಸಿ ಸದಸ್ಯರಾದ ನಂದೀಶ್, ಶಿಲ್ಪಾ, ಬಸವರಾಜ್, ರಶ್ಮಿ, ಮಮತಾ, ಮುಖ್ಯಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಡಿ.ಎ.ಕೆರೆ ಚಂದ್ರಶೇಖರ್, ಮುಖ್ಯಶಿಕ್ಷಕರಾದ ಭಾಗ್ಯಲಕ್ಷ್ಮಿ, ಭಾನುಮತಿ, ಅನಂತನಾರಾಯಣ್, ಸುನೀತಾ, ಶಿವರಾಮು, ಎ.ಬಿ.ಹಳ್ಳಿ ಮಂಜು, ಎಲಿಜಬತ್, ಮಹದೇವಯ್ಯ, ಶೋಭಾ ಇತರರಿದ್ದರು.