ಪೊಲೀಸ್‌ ಸಿಬ್ಬಂದಿಗೆ ಜೈಲು ಶಿಕ್ಷೆ

conviction
Published on

ಕಾರವಾರ: ಒಸಿ ಬುಕ್ಕಿಯಿಂದ 22 ಸಾವಿರ ರೂ. ಲಂಚ ಪಡೆದ ಪೊಲೀಸ್ ಸಿಬ್ಬಂದಿಗೆ ಎರಡುವರೆ ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ವಿಶೇಷ ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಹೊನ್ನಾವರ ನವಿಲಗೋಣ ಮೂಲದ ಹೊನ್ನಾವರ ಠಾಣೆಯಲ್ಲಿ ಸಿಬ್ಬಂದಿಯಾಗಿದ್ದ ಮುರಳೀಧರ ಮಹಾಬಲೇಶ್ವರ ನಾಯ್ಕ ಶಿಕ್ಷೆಗೊಳಗಾದ ಅಪರಾಧಿ.

ಭಟ್ಕಳ ಪಿಎಲ್‌ಡಿ ಬ್ಯಾಂಕ್ ಹೊನ್ನಾವರ ಶಾಖೆಯ ಪಿಗ್ಮಿ ಕಲೆಕ್ಟರ್ ಚಂದ್ರಹಾಸ ರಾಮಚಂದ್ರ ನಾಯ್ಕ ಅವರು ನೀಡಿದ ದೂರಿನಂತೆ ಲೋಕಾಯುಕ್ತ ಪೊಲೀಸರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಚಂದ್ರಹಾಸ ನಾಯ್ಕ ಹೊನ್ನಾವರದಲ್ಲಿ ವಿವಿಧ ಗೂಡಂಗಡಿಗಳಿಂದ ಒಸಿ ಹಣ ಸಂಗ್ರಹಿಸುತ್ತಿದ್ದರು. ಅಕ್ರಮವನ್ನು ಮರೆಮಾಚಲು ಹೊನ್ನಾವರ ಠಾಣೆ ಸಿಪಿಐ ಅವರಿಗೆ ಲಂಚ ಕೊಡಬೇಕು ಎಂದು ಹೇಳಿಕೊಂಡು 2017 ರ ನವೆಂಬರ್ 18 ರಂದು ಪೊಲೀಸ್ ಸಿಬ್ಬಂದಿ ಮುರಳೀಧರ ನಾಯ್ಕ 22 ಸಾವಿರ ರೂ.ಗಳನ್ನು ಚಂದ್ರಹಾಸ ಅವರಿಂದ ಪಡೆದುಕೊಂಡಿದ್ದರು.

ಹಣ ಪಡೆದಿರುವುದು ಲೋಕಾಯಕ್ತ ತನಿಖೆಯಲ್ಲಿ ಸಾಬೀತಾದ ಕಾರಣ ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ತೀರ್ಪು ಪ್ರಕಟಿಸಿದ್ದಾರೆ. ವಿಶೇಷ ಸಾರ್ವಜನಿಕ ಅಭಿಯೋಜಕ ಎಲ್.ಎಂ.ಪ್ರಭು ಲೋಕಾಯುಕ್ತ ಪರವಾಗಿ ಪ್ರಕರಣ ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net