ಸರಗಳ್ಳರಿಬ್ಬರಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ

chine-snatchers
Published on

ಕಾರವಾರ: ಮಹಿಳೆಯರ ಮಾಂಗಲ್ಯದ ಸರ ಹರಿದು, ಕಳ್ಳತನ ಮಾಡಿ ಬಂಧಿತರಾಗಿದ್ದ ಇಬ್ಬರು ಚೋರರಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಶಿವರಾಜ ನಿಂಗಪ್ಪ ಯಲಿಗಾರ ಹಾಗೂ ರಘು ವಸಂತಪ್ಪ ಖಬರದಿನ್ನಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು. 2016 ರ ಸೆಪ್ಟೆಂಬರ್ ತಿಂಗಳಲ್ಲಿ ಇಬ್ಬರೂ ಶಿರಸಿ ಮರಾಠಿಕೊಪ್ಪ ರಸ್ತೆಯ ಕೊಪ್ಪಳ ಕಾಲೋನಿ ಕ್ರಾಸ್ ರಸ್ತೆಯಲ್ಲಿ ಮೋಟರ್ ಸೈಕಲ್‌ನಲ್ಲಿ ಬಂದು ರೇಣುಕಾ ರಾಮಕೃಷ್ಣ ರೇವಣಕರ್ ಅವರ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯದ ಸರ ಹರಿದುಕೊಂಡು ಹೋಗಿ ಪರಾರಿಯಾಗಿದ್ದರು. ಹಾಗೂ ಅಕ್ಟೋಬರ್ ತಿಂಗಳಲ್ಲಿ ಕೋರ್ಟ್ ರಸ್ತೆಯ ಪೋಸ್ಟ್ ಆಫೀಸ್ ಎದುರು ಅನಿತಾ ಶಂಕರ ಸೋನಾವಣೆ ಅವರ ಕುತ್ತಿಗೆಯಿಂದ ಸರ ಹರಿದು ಪರಾರಿಯಾಗಿದ್ದರು. ಶಿರಸಿ ಸಿಪಿಐ ಬಿ.ಗಿರೀಶ ಸರಗಳ್ಳರನ್ನು ಬಂಧಿಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪಣಾಪಟ್ಟಿ ಸಲ್ಲಿಸಿದ್ದರು. ಪೊಲೀಸ್ ಕಾನ್ಸ್‌ಟೇಬಲ್‌ಗಳಾದ ರಾಘು ಅಂತೋಜಿ ಹಾಗೂ ರಮೇಶ ಮುಚ್ಚಂಡಿ ಅವರು ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಮುತುವರ್ಜಿ ವಹಿಸಿದ್ದರು.
ವಿಚಾರಣೆ ನಡೆಸಿದ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶರಾದ ಕಿರಣ ಕಿಣಿ ಅವರು, ಎರಡೂ ಪ್ರತ್ಯೇಕ ಪ್ರಕರಣಗಳಲ್ಲಿ 10 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಎಂ.ಮಳಗೀಕರ್ ವಾದ ಮಂಡಿಸಿದ್ದರು.
ಶಿಕ್ಷೆ ಪಕ್ಕಾ:
ನಿಷ್ಕಾಳಜಿಯಿಂದ ವಾಹನ ಚಲಾಯಿಸಿ 1 ವರ್ಷ, 2 ತಿಂಗಳ ಮಗುವಿನ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ಯಲ್ಲಾಪುರ ಜೆಎಂಎಫ್‌ಸಿ ನ್ಯಾಯಾಲಯ ವಿಽಸಿದ್ದ ಶಿಕ್ಷೆಯನ್ನು ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಖಚಿತ ಮಾಡಿದೆ.
ಮೌಲಾಲಿ ಅಮೀರಜಾನ್ ಶೇಖ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಯಲ್ಲಾಪುರದ ಕುಂದ್ರಾಳ-ಸಾತೊಡ್ಡಿ ಫಾಲ್ಸ್ ನಡುವೆ ರಸ್ತೆ ಕೆಲಸ ಮಾಡುವ ಸಂದರ್ಭದಲ್ಲಿ ಮಹಿಂದ್ರಾ ಜೀಪ್‌ನಲ್ಲಿ ನೀರು ಕೊಂಡೊಯ್ಯುವಾಗ ಜೀಪ್‌ನಿಂದ ಡಿಸಿದ ಕಲ್ಲು ರಸ್ತೆಯ ಪಕ್ಕದಲ್ಲಿ ಮಲಗಿಸಿಟ್ಟಿದ್ದ ಅರ್ಪಿತಾ ಸಣ್ಣಪ್ಪ ಹರಿಜನ ಎಂಬಾಕೆಗೆ ತಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಮಗು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದಲ್ಲಿ ಮೃತಪಟ್ಟಿತ್ತು. 2017 ರಲ್ಲಿ ಘಟನೆ ನಡೆದಿದ್ದು, ಅಪರಾಧಿಗೆ ಯಲ್ಲಾಪುರ ಜೆಎಂಎಫ್‌ಸಿ ನ್ಯಾಯಾಲಯ 1 ವರ್ಷ ಸಾದಾ ಕಾರಾಗೃಹ ವಾಸ ಹಾಗೂ 1 ಸಾವಿರ ರೂ. ದಂಡ ವಿಧಿಸಿತ್ತು. ಅಪರಾಧಿ ಮೇಲ್ಮನವಿ ಸಲ್ಲಿಸಿದ್ದು, ಅದನ್ನು ಶಿರಸಿಯ 1 ನೇ ಅಧಿಕ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಎತ್ತಿ ಹಿಡಿದಿದೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಎಂ.ಮಳಗೀಕರ್ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net