ಗಂಡನ ಕೊಲೆಗೆ ಸುಪಾರಿ ಕೊಟ್ಟವಳಿಗೆ 10 ವರ್ಷ ಜೈಲು

conviction (1)
Published on

ಕಾರವಾರ: ಗಂಡನನ್ನು ಕೊಲ್ಲಲು ಸುಪಾರಿ ನೀಡಿದ್ದ ಪತ್ನಿ ಹಾಗೂ ಕೊಲೆಮಾಡಲೆತ್ನಿಸಿದ ಅಪರಾಧಿಗೆ 10 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ದಾಂಡೇಲಿಯ ತೇಜಸ್ವಿನಿ ಅಂಕುಶ ಸುತಾರ ಹಾಗೂ ಗಣೇಶ ಶಾಂತಾರಾಮ ಪಾಟೀಲ ಎಂಬುವವರು ಶಿಕ್ಷೆಗೊಳಗಾಗಿದ್ದಾರೆ. ತೇಜಸ್ವಿನಿಯ ಪತಿ ಅಂಕುಶ ರಾಮಾ ಸುತಾರ ಅವರನ್ನು 2021 ಜೂನ್ 11 ರ ರಾತ್ರಿ ಕೊಲೆ ಮಾಡಲು ಯತ್ನಿಸಲಾಗಿತ್ತು. ಆದರೆ, ಅವರು ಬಚಾವಾಗಿದ್ದರು. ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪಿಎಸ್‌ಐ ಐ.ಆರ್.ಗಡ್ಡೇಕರ್ ಆರೋಪ ಪಟ್ಟಿ ಸಲ್ಲಿಸಿದ್ದರು.

ತೇಜಸ್ವಿನಿ ಹಾಗೂ ಅಂಕುಶ ಅವರ ವಿವಾಹವು 8 ವರ್ಷಗಳ ಹಿಂದೆ ನಡೆದಿತ್ತು. ಆದರೆ, ಅವರ ಜತೆ ಜೀವನ ನಡೆಸಲು ಇಷ್ಟವಿಲ್ಲದ ತೇಜಸ್ವಿನಿ ವಿನಿತಾ ಶಿವಾಜಿ ಚೌಗಲೆ ಎಂಬಾಕೆಯ ಮೂಲಕ ಗಣೇಶ ಶಾಂತಾರಾಮ ಪಟೇಲ್ ಎಂಬಾತನನ್ನು ಸಂಪರ್ಕಿಸಿದ್ದರು. ಕೊಲೆ ಮಾಡಿದಲ್ಲಿ 30 ಸಾವಿರ ರೂ. ನೀಡುವುದಾಗಿ ತಿಳಿಸಿದ್ದರು. 2021 ರ ಜೂನ್ 11 ರ ರಾತ್ರಿ ಗಣೇಶ ಹಾಗೂ ಇನ್ನೊಬ್ಬ ಅಪ್ರಾಪ್ತನ ಜತೆ ಅಂಕುಶನ ಮನೆಗೆ ನುಗ್ಗಿದ್ದರು. ಅಂಕುಶ ಮಲಗಿದ್ದಾಗ ಆತನನ್ನು ಮೂಗು, ಬಾಯಿ ಕಟ್ಟಿ ಕೊಲೆ ಮಾಡಲು ಯತ್ನಿಸಿದ್ದರು. ಆದರೆ, ಅಂಕುಶ ಬಚಾವಾಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಶಿರಸಿಯ

1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕಿರಣ ಕಿಣಿ ತೀರ್ಪು ಪ್ರಕಟಿಸಿದ್ದಾರೆ. ನ್ಯಾಯಾಲಯ ವಿಧಿಸಿ 40 ಸಾವಿರ ರೂ. ದಂಡದಲ್ಲಿ 10 ಸಾವಿರ ರೂ.ಗಳನ್ನು ಬಾಧಿತನಾದ ಅಂಕುಶ್‌ಗೆ ನೀಡುವಂತೆ ಆದೇಶ ಮಾಡಿದ್ದಾರೆ. ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ್ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು. ದಾಂಡೇಲಿ ಗ್ರಾಮೀಣ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಹೇಶ ಗಾವಡೆ ಸಾಕ್ಷಿಗಳನ್ನು ಹಾಜರುಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net