ಪೋಕ್ಸೋ ಪ್ರಕರಣದಲ್ಲಿ ಅಪರಾಧಿಗೆ 20 ವರ್ಷ ಜೈಲು

judgment
Published on

ಉಡುಪಿ: ಮಹಿಳಾ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ 2022ರಲ್ಲಿ ನಡೆದ ಅಪ್ರಾಪ್ತ ಬಾಲಕಿ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯ ಅಪರಾಧಿಗೆ 20 ವರ್ಷ ಜೈಲುಶಿಕ್ಷೆ ವಿಧಿಸಿದೆ.

ಕೋಟ ನಿವಾಸಿ ಸಚಿನ್​ ಪೂಜಾರಿ(26) ಶಿಕ್ಷೆಗೆ ಒಳಗಾದವನು. ಬಾಲಕಿಯನ್ನು ಅಪಹರಿಸಿದಕ್ಕೆ 5ವರ್ಷ ಕಠಿಣ ಜೈಲುಶಿಕ್ಷೆ ಮತ್ತು 5,000 ರೂ. ದಂಡ, ಅತ್ಯಾಚಾರಕ್ಕೆ 10ವರ್ಷ ಕಠಿಣ ಶಿಕ್ಷೆ ಮತ್ತು 10ಸಾವಿರ ರೂ. ದಂಡ, ಬಲವಂತವಾಗಿ ಹಣ ಮತ್ತು ಚಿನ್ನಾಭರಣ ಪಡೆದ ಪ್ರಕರಣಕ್ಕೆ ಒಂದು ವರ್ಷ ಜೈಲುಶಿಕ್ಷೆ ಮತ್ತು 3000 ರೂ. ದಂಡ, ಬೆದರಿಕೆಗೆ ಒಂದು ವರ್ಷ ಜೈಲುಶಿಕ್ಷೆ ಮತ್ತು 2 ಸಾವಿರ ರೂ. ದಂಡ, ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ 20 ವರ್ಷ ಜೈಲುಶಿಕ್ಷೆ ಮತ್ತು 20ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆದೇಶ ನೀಡಿದ್ದಾರೆ. 40 ಸಾವಿರ ರೂ. ದಂಡದ ಮೊತ್ತದಲ್ಲಿ 10 ಸಾವಿರ ರೂ. ಸರ್ಕಾರಕ್ಕೆ ಮತ್ತು 30 ಸಾವಿರ ರೂ. ಸಂತ್ರಸ್ತೆಗೆ ನೀಡುವಂತೆ ಮತ್ತು ಸರ್ಕಾರದಿಂದ ನೊಂದ ಬಾಲಕಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ.

ವಿವರ
ಅಪರಾಧಿ ಸಚಿನ್​ ಬಾಲಕಿಯ ಮೊಬೈಲ್​ ನಂಬರ್​ ಪಡೆದುಕೊಂಡು ಮೊಬೈಲ್​ನಲ್ಲಿ ಚಾಟಿಂಗ್​ ಮಾಡಿ, ಅಶ್ಲೀಲ ಫೋಟೋವನ್ನು ತರಿಸಿಕೊಂಡಿದ್ದ. ಅದನ್ನು ವೈರಲ್​ ಮಾಡುವುದಾಗಿ ಹೆದರಿಸಿ ನೊಂದ ಬಾಲಕಿಯಿಂದ ಲಕ್ಷಾಂತರ ರೂ. ಹಣ ಹಾಗೂ ಚಿನ್ನಾಭರಣ ಬಲವಂತವಾಗಿ ಪಡೆದುಕೊಂಡಿದ್ದ. ನಂತರ 2020ರ ಸೆಪ್ಟೆಂಬರ್​ ಹಾಗೂ ನವೆಂಬರ್​ ತಿಂಗಳಲ್ಲಿ ಆಕೆಯನ್ನು ಎರಡು ಮೂರು ಬಾರಿ ಬಲವಂತವಾಗಿ ಅಪಹರಿಸಿ ರ್ನಿಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಬಳಿಕ ಮತ್ತೆ ಹಣ ಹಾಗೂ ಚಿನ್ನಾಭರಣ ನೀಡುವಂತೆ ಪೀಡಿಸುತ್ತಿದ್ದನು. ಮನೆಯಿಂದ ಚಿನ್ನಾಭರಣ, ಹಣ ಕಾಣೆಯಾಗುತ್ತಿರುವ ಬಗ್ಗೆ ಮನೆಯವರು ಪರಿಶೀಲಿಸಿದಾಗ ಬಾಲಕಿ ಈ ಎಲ್ಲ ಘಟನೆಯನ್ನು ತಿಳಿಸಿದ್ದು, ಅದರಂತೆ ಮಹಿಳಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಟ್ಟು 42 ಸಾಕ್ಷಿಗಳ ಪೈಕಿ 24 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ 50 ದಾಖಲೆಗಳನ್ನು ಪರಿಶೀಲಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net