ಮೋದಿ ಜನಪ್ರಿಯತೆ ಮತವಾಗಿ ಪರಿವರ್ತನೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ

Vijayndran new
Published on

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯನ್ನು ಲೋಕಸಭೆ ಚುನಾವಣೆಯಲ್ಲಿ ಮತವಾಗಿ ಪರಿವರ್ತಿಸುವ ಜತೆಗೆ ಪಕ್ಷದಿಂದ ಏನೆಲ್ಲ ಕಾರ್ಯರೂಪ ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿ, ಸುತ್ತೂರು ಮಠದ ಜಾತ್ರಾ ಮಹೋತ್ಸವ, ತಾಯಿ ಚಾಮುಂಡೇಶ್ವರಿ ದರ್ಶನದ ಜತೆಗೆ ಕೋರ್ ಕಮಿಟಿ ಸಭೆ, ಮೈಸೂರು ಕ್ಲಸ್ಟರ್ ಸಭೆ ಮುಗಿದಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲ್ಲ 28 ಕ್ಷೇತ್ರಗಳಲ್ಲಿ ಎನ್‌ಡಿಎ ಕೂಟ ಗೆಲ್ಲುವ ಬಗ್ಗೆ ಚರ್ಚೆ ನಡೆದಿದೆ ಎಂದರು.
ಈ ಬಾರಿ ಕಳೆದ ಬಾರಿಗಿಂತ ಪ್ರತಿ ಬೂತ್‌ನಲ್ಲಿ ಶೇ.10ರಷ್ಟು ಮತ ಪ್ರಮಾಣ ಏರಿಕೆ ಆಗಬೇಕು ಎಂದು ಅಮಿತ್ ಷಾ ಅವರು ಸೂಚಿಸಿದ್ದಾರೆ. ಹಾಗೆಯೇ ರಾಜ್ಯದ ಎಲ್ಲ ಕಡೆ ಜೆಡಿಎಸ್ ಹಾಗೂ ಬಿಜೆಪಿ ಜತೆಗೂಡಿ ಕೆಲಸ ಮಾಡಬೇಕು ಎಂದಿದ್ದಾರೆ ಎಂದರು.
ಎರಡೂ ಪಕ್ಷದ ಪ್ರಮುಖರು ದೆಹಲಿಯಲ್ಲಿ ಕುಳಿತು ಸೀಟು ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೆ ಯಾರೇ ಅಭ್ಯರ್ಥಿಯಾದರೂ ಒಟ್ಟಾಗಿ ದುಡಿಯಬೇಕು ಎಂಬ ಕಿವಿಮಾತು ಹೇಳಿದ್ದಾರೆ. ಅವರ ಸಲಹೆಯನ್ನು ತೆಗೆದುಕೊಂಡಿದ್ದು, ಅದರ ಕಡೆ ಕೆಲಸ ಮಾಡುತ್ತೇವೆ. ನಮ್ಮ ಮುಂದೆ ನಮ್ಮ ಅಭ್ಯರ್ಥಿಗಳು ಗೆಲ್ಲಬೇಕು ಎನ್ನುವ ಒಂದೇ ಒಂದು ಗುರಿ ಇದೆ ಎಂದರು.
ಕಾಂಗ್ರೆಸ್ ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ದಿಲ್ಲಿ ಪ್ರತಿಭಟನೆ ಎಂಬ ನಾಟಕ ಮಾಡಿದ್ದಾರೆ. ಕೊಟ್ಟ ಕುದುರೆಯನ್ನು ಏರದವನು ಧೀರನೂ ಅಲ್ಲ, ವೀರನೂ ಅಲ್ಲ. ನಾಳಿನ ಅಧಿವೇಶನದಲ್ಲಿ ಈ ಎಲ್ಲ ವಿಚಾರಗಳನ್ನು ಚರ್ಚೆ ಮಾಡುತ್ತೇವೆ ಎಂದರು.
ರಾಜ್ಯ ಸರ್ಕಾರದ ನನ್ನ ತೆರಿಗೆ, ನನ್ನ ಹಕ್ಕು ಹೋರಾಟ ವಿಚಾರಕ್ಕೆ ಮಾತನಾಡಿ, ಆ ವಿಚಾರ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡುವ ವಿಚಾರ ಅಲ್ಲ. ಆ ಹೋರಾಟವನ್ನು ನಾವು ರಾಜ್ಯ ಮಟ್ಟದಲ್ಲೇ ಎದುರಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net