ಅನುದಾನಿತ ಶಾಲೆಯನ್ನು ಸರ್ಕಾರಿ ಶಾಲೆಯನ್ನಾಗಿಸಿ

madivala
Published on

ಮಡಿವಾಳ: ತೊರ್ನಹಳ್ಳಿಯಲ್ಲಿರುವ ರಮಾ ಮಾಧವ ಅನುದಾನಿತ ಪ್ರೌಢಶಾಲೆಯ ಎಲ್ಲ ಶಿಕ್ಷಕರು ನಿವೃತ್ತರಾಗುತ್ತಿದ್ದು, ಆಡಳಿತ ಮಂಡಳಿ ಮೂಲ ಸೌಲಭ್ಯ ಕಲ್ಪಿಸುವಲ್ಲಿ ನಿಷ್ಕಿಯವಾಗಿರುವುದರಿಂದ ಶಾಲೆಯನ್ನು ಸರ್ಕಾರ ವಶಕ್ಕೆ ಪಡೆದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅದೇ ಸ್ಥಳದಲ್ಲಿ ಸರ್ಕಾರಿ ಶಾಲೆ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದರು.

1984ರ ಜು.2ರಂದು ಮಾಲೂರಿನ ರಮಾ ಮಾಧವ ವಿದ್ಯಾಪಿಠ ಸಂಸ್ಥಾಪಕ ದಿ. ಬಿ.ಎ.ನಾರಾಯಣಸ್ವಾಮಿ ಅವರು ಸಂಸ್ಥೆಯನ್ನು ಆರಂಭಿಸಿದ್ದು, ತೊರ್ನಹಳ್ಳಿಯಲ್ಲಿ ನಗರ್ತ ಲಿಂಗಾಯತರ ಧರ್ಮ ಛತ್ರದಲ್ಲಿ ಶಾಲೆ ಪ್ರಾರಂಭಿಸಲಾಯಿತು. ಸುಮಾರು 11 ವರ್ಷ ಶಿಕ್ಷಕರು ಉತ್ತಮ ಶಿಕ್ಷಣ ನೀಡಿದ್ದು, 1995ರ ಮೇ 15 ರಂದು ಸರ್ಕಾರ ವೇತನ ಅನುದಾನಕ್ಕೆ ಒಳಪಡಿಸಿತು. ಅನುದಾನಕ್ಕೆ ಶಾಲೆ ಒಳಪಟ್ಟ ನಂತರ ಆಡಳಿತ ಮಂಡಳಿಯವರು ಶಿಕ್ಷಕರಿಂದ ಪ್ರತಿ ತಿಂಗಳು ಹಣ ಪಡೆಯುವುದು, ಮೂಲ ಸೌಲಭ್ಯಗಳಿಗೆ ಒತ್ತು ನೀಡದಿರುವುದರಿಂದ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಮಧ್ಯೆ ವಾಗ್ವಾದಗಳು ನಡೆಯುತ್ತಲೇ ಇದ್ದವು. ಇದನ್ನು ಅರಿತ ಗ್ರಾಮಸ್ಥರು ಮತ್ತು ಪಂಚಾಯಿತಿಯವರು ಅಂದಿನ ಗ್ರಾಪಂ ಅಧ್ಯಕ್ಷ ಕೆ.ಮುನಿಶಾಮಿ ಅವರ ನೇತೃತ್ವದಲ್ಲಿ ಸಭೆ ನಡೆಸಿ, ಆಡಳಿತ ಮಂಡಳಿ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ 5ವರ್ಷ ಮನವಿ ಕೊಡುತ್ತಲೇ ಬಂದಿದ್ದರು. ನಂತರ ಸರ್ಕಾರ ನೈಜ ಪರಿಸ್ಥಿತಿ ಅರ್ಥ ಮಾಡಿಕೊಂಡು 2007ರಲ್ಲಿ ಸರ್ಕಾರವು ಮಾಲೂರಿನ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿತ್ತು.

ಶಾಲೆಯ ಅಭಿವೃದ್ಧಿಗೆ ಕಾರಣರಾದ ಮುಖ್ಯಶಿಕ್ಷಕ ಡಿ.ಸಿ.ಮುನಿರಾಜ ಅವರು 2021ರ ಜೂ.30ರಂದು ವಯೋನಿವೃತ್ತಿ ಹೊಂದಿದ್ದಾರೆ. ಈ ಹಿಂದೆ ಮೂವರು ವಿಷಯ ಶಿಕ್ಷಕರೂ ನಿವೃತ್ತಿಯಾಗಿದ್ದು,2025ರ ಜೂನ್​ ವೇಳೆಗೆ ಎಲ್ಲ ಶಿಕ್ಷಕರು ನಿವೃತ್ತರಾಗುತ್ತಿದ್ದು, ದೈಹಿಕ ಶಿಕ್ಷಣ ಶಿಕ್ಷಕರು ಮಾತ್ರ (2026ರ ಜೂನ್​-ವರೆಗೆ) ಇರಲಿದ್ದಾರೆ.

ಶಾಲೆಯಲ್ಲಿ 8ರಿಂದ 10ನೇ ತರಗತಿಯಲ್ಲಿ ಒಟ್ಟು 200 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ತೊಡಕಾಗುತ್ತದೆ. ಆಡಳಿತ ಮಂಡಳಿ ಮುಂದೆ ಶಾಲೆ ನಡೆಸಲು ಬಂದರೂ ಸಹ ಗ್ರಾಮಸ್ಥರು ಅವಕಾಶ ನೀಡುವುದಿಲ್ಲ. ಸುತ್ತ ಮುತ್ತಲಿನ ಗ್ರಾಮಗಳ ಬಡ ಮಕ್ಕಳಿಗೆ ಶೈಕ್ಷಣಿಕ ತೊಂದರೆಯಾಗದಂತೆ ಹಾಗೂ ಸುಮಾರು 10ಕೀ.ಮಿ. ವ್ಯಾಪ್ತಿಯಲ್ಲಿ ಯಾವುದೇ ಪ್ರೌಢಶಾಲೆಗಳು ಇಲ್ಲದೇ ಇರುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಈ ಶಾಲೆ ಮುಚ್ಚಿ, ಸರ್ಕಾರಿ ಶಾಲೆ ಪ್ರಾರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net