23 ಬಡಮಕ್ಕಳಿಗೆ ಎಬಿಸಿಡಿ ಕಲಿಕೆ ಭಾಗ್ಯ! : ಹರೇಕಳದ ಎರಡು ಸರ್ಕಾರಿ ಶಾಲೆಗಳಿಗೂ ಆಂಗ್ಲಮಾಧ್ಯಮ ಪಟ್ಟ

New Project (23)
Published on

ಅನ್ಸಾರ್ ಇನೋಳಿ ಉಳ್ಳಾಲ ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡುವಂತೆ ಜನಪ್ರತಿನಿಧಿಗಳಿಗೆ ಅದೆಷ್ಟೋ ಸಮಯಗಳಿಂದ ಮನವಿ ನೀಡಿದರೂ ಪ್ರಯೋಜನವಾಗದ ಸ್ಥಿತಿ ಕೆಲವೆಡೆ ಇದೆ. ಆದರೆ ಆ ವಿಷಯದಲ್ಲಿ ಹರೇಕಳ ಗ್ರಾಮದ ಮಕ್ಕಳು ಭಾಗ್ಯವಂತರು ಎಂದರೂ ತಪ್ಪಿಲ್ಲ. ಯಾಕೆಂದರೆ ಇಲ್ಲಿರುವ ಎರಡು ಸರ್ಕಾರಿ ಶಾಲೆಗಳೂ ಆಂಗ್ಲ ಮಾಧ್ಯಮವಾಗಿ ಪರಿವರ್ತನೆಯಾಗಿರುವುದು ವಿಶೇಷ. ಹರೇಕಳ ಗ್ರಾಮದಲ್ಲಿ ಎರಡು ಸರ್ಕಾರಿ ಪ್ರಾಥಮಿಕ, ಒಂದು ಪ್ರೌಢಶಾಲೆ, ಒಂದು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆ, ಎರಡು ಖಾಸಗಿ ಪ್ರಾಥಮಿಕ, ಪ್ರೌಢಶಾಲೆ, ಒಂದೊಂದು ಖಾಸಗಿ ಮತ್ತು ಸರ್ಕಾರಿ ಪದವಿಪೂರ್ವ ಹಾಗೂ ಪದವಿ ಕಾಲೇಜು ಇದೆ. ಈ ಪೈಕಿ ನ್ಯೂಪಡ್ಪು ಮತ್ತು ರಾಜಗುಡ್ಡೆಯಲ್ಲಿ ಸರ್ಕಾರಿ ಶಾಲೆಗಳವೆ. ನ್ಯೂಪಡ್ಪುವಿನ ಶಾಲೆ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಶ್ರಮದಿಂದ ನಿರ್ಮಾಣಗೊಂಡಿದ್ದು, ಪ್ರಸ್ತುತ ಈ ಶಾಲೆಯಲ್ಲಿ ಎಲ್ ಕೆಜಿಯಿಂದ ಪ್ರಥಮ ಪಿಯುಸಿ ವರೆಗೆ ತರಗತಿಗಳಿವೆ. ರಾಜಗುಡ್ಡೆಯಲ್ಲಿ 1ರಿಂದ 8ನೇ ತರಗತಿ ವರೆಗಿನ ಶಿಕ್ಷಣ ನೀಡಲಾಗುತ್ತಿದೆ. ಏಕಕಾಲದಲ್ಲಿ ಲಭಿಸಿದ ಸೌಲಭ್ಯ! ರಾಜಗುಡ್ಡೆ ಶಾಲೆ 1991ರಲ್ಲಿ ಆರಂಭಗೊಂಡಿದ್ದು, ಪ್ರಸ್ತುತ 143 ವಿದ್ಯಾರ್ಥಿಗಳಿದ್ದಾರೆ. ಸರ್ಕಾರ ಈ ವರ್ಷ ಆಂಗ್ಲಮಾಧ್ಯಮಕ್ಕೆ ವಾನ್ಯತೆ ನೀಡಿದ್ದು, 25 ಮಕ್ಕಳಿದ್ದಾರೆ. ಇಲ್ಲಿ ಎಲ್‌ಕೆಜಿ ಇಲ್ಲದೇ ನೇರವಾಗಿ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. ಶಾಲೆಗೆ ಕೊಠಡಿಗಳ ಕೊರತೆ ನೀಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯ ವಿಶೇಷ ಅನುದಾನದಡಿ 30 ಲಕ್ಷ ವೆಚ್ಚದಲ್ಲಿ ಎರಡು ಕೋಣೆಗಳ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ನ್ಯೂಪಡ್ಪು ಪ್ರಾಥಮಿಕ ಶಾಲೆ ಹರೇಕಳ ಹಾಜಬ್ಬರ ಶ್ರಮದ ಪ್ರತೀಕ. ಈ ಶಾಲೆ 1999-2000ನೇ ಇಸವಿಯಲ್ಲಿ ಆರಂಭಿಸಲಾಗಿದ್ದು ಪ್ರಸ್ತುತ 1ರಿಂದ 7ನೇ ತರಗತಿವರೆಗೆ 129 ಮಕ್ಕಳಿದ್ದಾರೆ. ಕಳೆದ ಸಾಲಿನಲ್ಲಿ ಎಲ್‌ಕೆಜಿ ತರಗತಿ ಅರಂಭಿಸಲಾಗಿದ್ದು, ಹೈನೋದ್ಯಮಿ ಮೈಮೂನ ಅವರು ಶಿಕ್ಷಕರ ವೇತನ ಪಾವತಿಸಿದ್ದರು. ಪ್ರಸ್ತುತ ಎಲ್‌ಕೆಜಿಯಲ್ಲಿ 20 ಮಕ್ಕಳಿದ್ದಾರೆ. ಶಾಲೆಗೆ ಕೊಠಡಿಗಳು ಅಗತ್ಯವಿರುವ ಕಾರಣ ಎರಡು ಕೊಠಡಿಗಳ ಕಟ್ಟಡ ನಿರ್ಮಾಣಕ್ಕೆ ಕೆಲಸ ನಡೆಯುತ್ತಿದೆ. ಅನುದಾನಿತ, ಖಾಸಗಿ ಶಾಲೆಗಳಿಗೆ ನಡುಕ! ಹರೇಕಳ ಸಣ್ಣ ಗ್ರಾಮ ಆದರೂ ಶಿಕ್ಷಣ ಸಂಸ್ಥೆಗಳ ವ್ಯವಸ್ಥೆಯಲ್ಲಿ ಇತರ ಗ್ರಾಮಗಳಿಗಿಂತ ಮುಂಚೂಣಿಯಲ್ಲಿದೆ. ಈ ಗ್ರಾಮದಲ್ಲಿ ಸರ್ಕಾರಿ, ಅನುದಾನಿತ, ಖಾಸಗಿ ಸಹಿತ ಐದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಎರಡು ಪದವಿಪೂರ್ವ ಹಾಗೂ ಒಂದು ಪದವಿ ಕಾಲೇಜು ಇದೆ ಎಂದರೆ ಅಚ್ಚರಿಯೇ ಸರಿ. ಇದೀಗ ಗ್ರಾಮದಲ್ಲಿರುವ ಎರಡೂ ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಶಿಕ್ಷಣ ಆರಂಭಗೊಂಡಿದೆ. ಇದರಿಂದಾಗಿ ಗ್ರಾಮದ ಮಕ್ಕಳು ಮುಂದಿನ ದಿನಗಳಲ್ಲಿ ಉಚಿತ ಶಿಕ್ಷಣದ ಜತೆ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಊಟ, ರಾಗಿ ವಾಲ್ಟ್, ಮೊಟ್ಟೆಯಂಥ ಪೌಷ್ಟಿಕ ಆಹಾರವೂ ಉಚಿತವಾಗಿಯೇ ಸಿಗುವ ಸರ್ಕಾರಿ ಶಾಲೆಯತ್ತಲೇ ಆಸಕ್ತರಾಗಲಿದ್ದಾರೆ. ಇದರ ಪರಿಣಾಮವಾಗಿ ಖಾಸಗಿ, ಅನುದಾನಿತ, ಸರ್ಕಾರಿ ಶಾಲೆಗಳಿಗೆ ಮಕ್ಕಳ ಕೊರತೆಯಾಗುವ ಆತಂಕವೂ ಇದೆ.

ಹರೇಕಳದಲ್ಲಿ ಪಿ.ಯು. ಕಾಲೇಜು ಉಳಿಯಬೇಕಾದರೆ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಬೇಕಿದೆ. ಆ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಅತ್ಯಂತ ಗ್ರಾಮೀಣ ಭಾಗವಾಗಿರುವ ಹರೇಕಳದಲ್ಲಿ ಎರಡೂ ಶಾಲೆಗಳಲ್ಲಿ ಆಂಗ್ಲವಾಧ್ಯಮ ಆರಂಭಿಸಲಾಗಿದೆ. ಮುಂದಕ್ಕೆ ಪಾವೂರಿನ ಇನೋಳಿಯಲ್ಲೂ ಆಂಗ್ಲವಾಧ್ಯಮ ಆರಂಭಿಸಲಾಗುವುದು. ಯು.ಟಿ.ಖಾದರ್, ವಿಧಾನಸಭಾಧ್ಯಕ್ಷ. ಪ್ರಸ್ತುತ ಸನ್ನಿವೇಶದಲ್ಲಿ ಪೋಷಕರು ಆಂಗ್ಲ ಶಿಕ್ಷಣದ ವ್ಯಾಮೋಹಕ್ಕೆ ಒಳಗಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಶಿಕ್ಷಣ ಅನಿವಾರ್ಯ. ಆದರೆ ಶಾಲೆಗಳ ಅಂತರ ದೂರವಿದ್ದು, ಗುಣಮಟ್ಟದ ಶಿಕ್ಷಣ ಸಿಕ್ಕಾಗ ಸರ್ಕಾರಿ ಶಾಲೆಗಳ ಜತೆ ಅನುದಾನಿತ ಮತ್ತು ಖಾಸಗಿ ಶಾಲೆಗಳೂ ಹೆಚ್ಚು ಕಾಲ ಉಳಿಯಲು ಸಾಧ್ಯ. ರವೀಂದ್ರ ರೈ ಕಲ್ಲಿವಾರ್, ನಿವೃತ್ತ ಮುಖ್ಯಶಿಕ್ಷಕ. ಗ್ರಾಮೀಣ ಭಾಗದಲ್ಲಿರುವ ಖಾಸಗಿ ಶಾಲೆಗಳಲ್ಲಿ ಅತ್ಯಂತ ಕಡಿಮೆ ಶುಲ್ಕ ಪಡೆದು ಗುಣಮಟ್ಟದ ಆಂಗ್ಲ ಶಿಕ್ಷಣ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸಿದರೆ ಮಕ್ಕಳು ಶಿಕ್ಷಣಕ್ಕೆ ಹೊಂದಿಕೊಳ್ಳುವುದು ಕಷ್ಟ. ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು, ಅಂಬ್ಲಮೊಗರು ವಿದ್ಯಾರತ್ನ ಆಂಗ್ಲಮಾಧ್ಯಮ ಶಾಲಾ ಆಡಳಿತ ನಿರ್ದೇಶಕ. https://www.vijayavani.net/abira-anganwadi-central-bala-mela https://www.vijayavani.net/an-example-is-through-a-simple-message

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net