ನಿವೇಶನವಾಗಿ ಕಾಫಿ ಎಸ್ಟೇಟ್ ಪರಿವರ್ತನೆ

Conversion of coffee estate into estate
Published on

ಮಡಿಕೇರಿ:

ಜಿಲ್ಲೆಯ ಸಿದ್ದಾಪುರ ಬಳಿ ಸುಮಾರು ೨,೪೦೦ ಎಕರೆ ಕಾಫಿ ಎಸ್ಟೇಟ್ ಅನ್ನು ವಸತಿ ನಿವೇಶನಕ್ಕಾಗಿ ಪರಿವರ್ತನೆ ಮಾಡಲು ನಡೆದಿರುವ ಪ್ರಯತ್ನವನ್ನು ಸಿಎನ್‌ಸಿ ಖಂಡಿಸಿದೆ. ಇಷ್ಟು ದೊಡ್ಡ ಪ್ರಮಾಣದ ಭೂಪರಿವರ್ತನೆಯನ್ನು ನಿಷೇಧಿಸುವಂತೆ ಕೋರುವ ಮನವಿ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಮತ್ತಿತರರಿಗೆ ಸಿಎನ್‌ಸಿ ರವಾನಿಸಿದೆ.

ಸಿದ್ದಾಪುರದ ಕಾವೇರಿ ಜಲಾನಯನ ಸಮೀಪವಿರುವ ೨,೪೦೦ ಎಕರೆ ಖಾಸಗಿ ಕಾಫಿ ಎಸ್ಟೇಟ್ ಅನ್ನು ಶೀಘ್ರದಲ್ಲೇ ಮನೆ ನಿವೇಶನಗಳಾಗಿ ಪರಿವರ್ತಿಸಲಾಗುತ್ತಿದೆ. ಹಸಿರು ಹೊದಿಕೆಯನ್ನು ಹೆಚ್ಚಿಸಿದ್ದ ಕಾಫಿ ಎಸ್ಟೇಟ್ ಅನ್ನು ಶೀಘ್ರದಲ್ಲೇ ಕತ್ತರಿಸಿ ನೆಲಸಮಗೊಳಿಸಿ ವಸತಿ ನಿವೇಶನಗಳಿಗೆ ದಾರಿ ಮಾಡಿಕೊಡಲಾಗುತ್ತಿದೆ ಎಂದು ಸಿಎನ್‌ಸಿ ಮುಖಂಡ ಎನ್.ಯು. ನಾಚಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅತ್ಯಂತ ಕಡಿಮೆ ದರಕ್ಕೆ ಕಾಫಿ ಎಸ್ಟೇಟ್ ಖರೀದಿಸಲಾಗಿದ್ದು, ಈಗ ೨೦ ಪಟ್ಟು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಇದನ್ನು ಮನೆ ನಿವೇಶನಗಳಾಗಿ ಪರಿವರ್ತಿಸಲಾಗುತ್ತಿದ್ದು, ಜಿಲ್ಲೆಯ ಹೊರಗಿನ ಹೂಡಿಕೆದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ ಸಂಪೂರ್ಣ ಪರಿಸರ ವ್ಯವಸ್ಥೆಯು ಕಳೆದುಹೋಗಲಿದ್ದು, ಹೆಚ್ಚಿದ ಮಾನವ ದಟ್ಟಣೆಯು ನೀರಿನ ಕೊರತೆಗೆ ಕಾರಣವಾಗಲಿದೆ.

ಕಕ್ಕಬೆಯಲ್ಲಿರುವ ಇಗ್ಗುತಪ್ಪ ದೇಗುಲದ ಬಳಿ ಇನ್ನೂ ೩೦೦ ಎಕರೆ ಭೂಮಿಯನ್ನು ಖರೀದಿಸಲಾಗುತ್ತಿದ್ದು, ಇದನ್ನೂ ಮನೆ ನಿವೇಶನಗಳಾಗಿ ಪರಿವರ್ತಿಸಲಾಗುತ್ತಿದೆ. ಇದು ಪ್ರಾಚೀನ ತೊರೆಗಳು, ಕಾವೇರಿ ನದಿ ಮತ್ತು ಅದರ ಉಪನದಿಗಳ ಅಸ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಈ ಅಕ್ರಮ ರಿಯಲ್ ಎಸ್ಟೇಟ್ ಮಾಫಿಯಾ ಬಗ್ಗೆ ಕಠಿಣ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net