

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ತಲಕಾವೇರಿ ಕ್ಷೇತ್ರ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣಾಚಾರ್ ಪುತ್ರಿಯರಿಬ್ಬರು ಹಿಂದು ಧರ್ಮ ತೊರೆದು ಅನ್ಯಧರ್ಮಕ್ಕೆ ಮತಾಂತರಗೊಂಡಿರುವುದು ರಾಜ್ಯ ಸರ್ಕಾರದ 5 ಲಕ್ಷ ರೂ. ಪರಿಹಾರ ಹಣ ಪಡೆಯಲು ಅಡ್ಡಿಯಾಗಿದೆ.
ಆ.15 ರಂದು ಉಸ್ತುವಾರಿ ಸಚಿವ ವಿ.ಸೋಮಣ್ಣ ಭಾಗಮಂಡಲದಲ್ಲಿ ಇಬ್ಬರು ಪುತ್ರಿಯರಿಗೆ ತಲಾ 2.50 ಲಕ್ಷ ರೂ.ನಂತೆ ನೀಡಿದ್ದ ಚೆಕ್ ಹಿಂದಿರುಗಿಸಲಾಗಿದೆ.
ಆ.5 ರಂದು ರಾತ್ರಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಸಾಲಿನ ಗಜಗಿರಿ ಬೆಟ್ಟ ಕುಸಿದು ನಾರಾಯಣಾಚಾರ್, ಶಾಂತಾ ಆಚಾರ್, ಆನಂದತೀರ್ಥ ಸ್ವಾಮೀಜಿ, ರವಿಕಿರಣ್ ಭಟ್, ಶ್ರೀನಿವಾಸ್ ಪಡ್ಡಿಲಾಯ ಭೂಸಮಾಧಿಯಾಗಿದ್ದರು. ಈ ಪೈಕಿ ಶಾಂತಾ ಆಚಾರ್, ಶ್ರೀನಿವಾಸ್ ಭಟ್ ಮೃತದೇಹ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ದೇಶದಲ್ಲಿ ನೆಲೆಸಿರುವ ನಾರಾಯಣಾಚಾರ್ ಪುತ್ರಿಯರು ವಿದೇಶದಿಂದ ಮರಳಿದ ಮೇಲೆ ತಮ್ಮ ಪಾಲಕರು ನಾಪತ್ತೆಯಾಗಿರುವ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದಕ್ಕೂ ಮೊದಲು ನಾರಾಯಣಾಚಾರ್ ಅವರ ಸಹೋದರಿ ಸುಶೀಲಾ ಕೆದಿಲಾಲ ನಾಪತ್ತೆ ದೂರು ನೀಡಿದ್ದರು.
ದೂರು ನೀಡುವ ಸಂದರ್ಭ ಪುತ್ರಿಯರು ಶಾರದಾ ಆಚಾರ್, ನಮಿತಾ ಆಚಾರ್ ಎಂದು ತಮ್ಮ ಹೆಸರು ಉಲ್ಲೇಖಿಸಿದ್ದರು. ಅದರನ್ವಯ ರಾಜ್ಯ ಸರ್ಕಾರದಿಂದ ಪ್ರಕೃತಿ ವಿಕೋಪದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡುವ 5 ಲಕ್ಷ ರೂ. ಪರಿಹಾರ ಮೊತ್ತವನ್ನು ಪುತ್ರಿಯರಿಬ್ಬರಿಗೆ ಹಂಚಲಾಗಿತ್ತು. ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ ವೇಳೆ ಉಲ್ಲೇಖಿಸಿದ ಹೆಸರಿಗೆ ಜಿಲ್ಲಾಡಳಿತದಿಂದ ಪರಿಹಾರದ ಚೆಕ್ ಬರೆಯಲಾಗಿತ್ತು. ಚೆಕ್‌ನಲ್ಲಿ ತಮ್ಮ ಹೆಸರು ಶಾರದಾ ಆಚಾರ್, ನಮಿತಾ ಆಚಾರ್ ಇರುವುದನ್ನು ಗಮನಿಸುತ್ತಿದ್ದಂತೆ ಪುತ್ರಿಯರು ಗೊಂದಲಕ್ಕೀಡಾದರು. ತಕ್ಷಣ ಮಡಿಕೇರಿ ತಹಸೀಲ್ದಾರ್ ಪಿ.ಎಸ್. ಮಹೇಶ್ ಬಳಿ ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಬೇರೆ ಎಂದು ಮಾಹಿತಿ ನೀಡಿದರು.
ಆ.21 ರಂದು ಪುತ್ರಿಯರಿಬ್ಬರು ತಮಗೆ ನೀಡಿದ ಚೆಕ್ ಅನ್ನು ಭಾಗಮಂಡಲ ನಾಡ ಕಚೇರಿಗೆ ಹಿಂದಿರುಗಿಸಿದ್ದಾರೆ. ಶೆನೋನ್ ಫರ್ನಾಂಡೀಸ್ (ಶಾರದಾ ಆಚಾರ್), ನಮಿತಾ ನಜೇರತ್ ಹೆಸರಿಗೆ ಚೆಕ್ ನೀಡಲು ಕೋರಿದ್ದಾರೆ. ಹಾಗಾಗಿ, ತಮ್ಮ ಮೂಲ ಹೆಸರು ಕಾನೂನುಬದ್ಧವಾಗಿ ಬದಲಾಗಿರುವುದಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ಉಪತಹಸೀಲ್ದಾರ್ ದೊರೆ ಸೂಚನೆ ನೀಡಿದ್ದಾರೆ. ನ್ಯಾಯಾಲಯದ ಮೂಲಕ ಕ್ರಮಾನುಸಾರ ಹೆಸರು ಬದಲಾವಣೆ ಆಗಿರುವ ದಾಖಲೆ ಸಲ್ಲಿಸುವಂತೆ ಹೇಳಿದ್ದು, ಪುತ್ರಿಯರು ಇನ್ನೂ ಸಲ್ಲಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಆದರೆ, ಪರಿಹಾರ ಹಣ ಪಡೆಯುವುದಕ್ಕೆ ಬದಲಾದ ಹೆಸರು ಅಡ್ಡಿಯಾಗುವುದಿಲ್ಲ. ಆಸ್ತಿಪಾಸ್ತಿ ವಿಚಾರದಲ್ಲಿ ಹಿಂದು ಕಾನೂನು ಅನ್ವಯ ಆಗುವುದರಿಂದ ಮತಾಂತರಗೊಂಡಿರುವವರಿಗೆ ಆಸ್ತಿ ನೀಡುವುದಕ್ಕೆ ಕುಟುಂಬಸ್ಥರು ತಗಾದೆ ತೆಗೆಯಲು ಅವಕಾಶವಿದೆ. ಪ್ರಕೃತಿ ವಿಕೋಪದ ಪರಿಹಾರಕ್ಕೂ, ಮತಾಂತರಕ್ಕೂ ಸಂಬಂಧವಿರುವುದಿಲ್ಲ ಎಂದು ವಕೀಲ ಅಚ್ಚಂಡೀರ ಪವನ್ ಪೆಮ್ಮಯ್ಯ ಮಾಹಿತಿ ನೀಡಿದ್ದಾರೆ.
ಕೊಡಗಿನ ಹಿರಿಯ ಸಂಘ ಪರಿವಾರದ ಮುಖಂಡರಾಗಿದ್ದ ನಾರಾಯಣಾಚಾರ್ ಹಿಂದುತ್ವ ವಿಚಾರದಲ್ಲಿ ಹೋರಾಟ ಮಾಡುತ್ತಿದ್ದರು. ಆದರೆ, ಅವರ ಪುತ್ರಿಯರಿಬ್ಬರು ಅನ್ಯಧರ್ಮಕ್ಕೆ ಮತಾಂತರಗೊಂಡಿರುವುದು ರಾಜಕೀಯವಾಗಿ ಅವರಿಗೆ ಬಾರಿ ಹಿನ್ನಡೆಯುಂಟು ಮಾಡಿತ್ತು. ಈ ಬಗ್ಗೆಯೂ ಜನವಲಯದಲ್ಲಿ ಚರ್ಚೆ ನಡೆಯುತ್ತಿದೆ.
ತಿಥಿ ಕರ್ಮಾಂತರ ಹೇಗೆ?: ಹಿಂದು ಧರ್ಮ ತೊರೆದು ಇಸ್ಲಾಂ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ನಾರಾಯಣಾಚಾರ್ ಪುತ್ರಿಯರಿಂದ ತಿಥಿ ಕರ್ಮಾಂತರ ನೆರವೇರಿಸಿದ್ದಕ್ಕೆ ಇದೀಗ ಆಕ್ಷೇಪ ವ್ಯಕ್ತವಾಗುತ್ತಿದೆ.
ಧರ್ಮ ಬಿಟ್ಟು ಹೋಗಿರುವವರಿಗೆ ಯಾವ ರೀತಿ ತಿಥಿ ಕಮಾರ್ಂತರ ನೆರವೇರಿಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ನಾರಾಯಣಾಚಾರ್, ಆನಂದತೀರ್ಥ, ಶಾಂತ ಆಚಾರ್ ಅವರ ತಿಥಿ ಕಮಾರ್ಂತರವನ್ನು ಕುಟುಂಬಸ್ಥರಾದ ನಾವು ನೆರವೇರಿಸಿದ್ದೇವೆ ಎಂದು ತಲಕಾವೇರಿ ಕ್ಷೇತ್ರದ ಅರ್ಚಕ ಪ್ರಶಾಂತ್ ಆಚಾರ್ ಹೇಳುತ್ತಾರೆ.
ಇತ್ಯರ್ಥಗೊಳ್ಳದ ಪರಿಹಾರ ಹಣ ವಿಚಾರ: ನಾರಾಯಣಾಚಾರ್ ಅವರ ಹಿರಿಯ ಸಹೋದರ ಆನಂದತೀರ್ಥ ಸ್ವಾಮೀಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ 5 ಲಕ್ಷ ರೂ. ಪರಿಹಾರ ನೀಡುವ ಬಗ್ಗೆ ಇನ್ನೂ ಇತ್ಯರ್ಥಗೊಂಡಿಲ್ಲ. ಸಹೋದರಿ ಸುಶೀಲಾ ಕೆದಿಲಾಯ ಅವರಿಗೆ ಪರಿಹಾರ ಚೆಕ್ ನೀಡಿದ್ದಕ್ಕೆ ನಾರಾಯಣಾಚಾರ್ ಪುತ್ರಿಯರು ಆಕ್ಷೇಪವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಸೂಚನೆಯನ್ವಯ ಸುಶೀಲಾ ಅವರಿಂದ ತಹಸೀಲ್ದಾರ್ ಪಿ.ಎಸ್. ಮಹೇಶ್ ಚೆಕ್ ಹಿಂಪಡೆದಿದ್ದರು. ಕಾನೂನು ಸಲಹೆ ಪಡೆದು ಪರಿಹಾರ ಚೆಕ್ ಯಾರಿಗೆ ನೀಡಬೇಕೆಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಅಧಿಕಾರಿ, ಜನಪ್ರತಿನಿಧಿ ಭರವಸೆ ನೀಡಿದ್ದರು. ಮಂಗಳವಾರ ಈ ವಿಚಾರದಲ್ಲಿ ಸ್ಪಷ್ಟತೆ ಸಿಗಲಿದೆ ಎಂದು ತಹಸೀಲ್ದಾರ್ ಪಿ.ಎಸ್. ಮಹೇಶ್ ಹೇಳುತ್ತಾರೆ.
ವಿಶೇಷ ಪ್ರಕರಣ ಎಂದು ಪರಿಗಣಿಸಿ: ಆ.8 ರಿಂದ ತಲಕಾವೇರಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಶೋಧ ಕಾರ್ಯಾಚರಣೆಯನ್ನು ಆ.22 ರಂದು ಸ್ಥಗಿತಗೊಳಿಸಲಾಗಿದೆ. ಶಾಂತಾ ಆಚಾರ್, ಶ್ರೀನಿವಾಸ್ ಪಡ್ಡಿಲಾಯ ಅವರ ಮೃತದೇಹ ಪತ್ತೆಹಚ್ಚಲು ಸಾಧ್ಯವಾಗಿಲ್ಲ. 2018, 2019 ರಲ್ಲಿ ಪತ್ತೆಯಾಗದ ಮೃತದೇಹಕ್ಕೆ ಸಂಬಂಧಿಸಿದಂತೆ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಸರ್ಕಾರದಿಂದ ಪರಿಹಾರ ನೀಡಲಾಗಿತ್ತು. ಅದೇ ರೀತಿ ಈ ವರ್ಷವೂ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಡಳಿತ ನಿರ್ಧರಿಸಿದೆ.