ಸಾಹಿತ್ಯದ ಹೆಸರಿನಲ್ಲೇಕೆ ಅತ್ಯಾಚಾರ?: ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾರ್ಮಿಕ ನುಡಿ

Conversation with Narahalli Balasubrahmanya Mandya
Published on

ಮಂಡ್ಯ: ಸಾಹಿತ್ಯದ ಹೆಸರಿನಲ್ಲಿ ಏಕೆ ಅತ್ಯಾಚಾರ ಮಾಡುತ್ತಿದ್ದೀರಿ. ಸಾಹಿತ್ಯಕ್ಕೆ ಒಂದು ಪಾವಿತ್ರ್ಯ ಇದ್ದು, ಅದನ್ನು ಕಾಪಾಡಿಕೊಳ್ಳಬೇಕು ಎಂದು ಚಿಂತಕ ನರಹಳ್ಳಿ ಬಾಲಸುಬ್ರಹ್ಮಣ್ಯ ಮಾರ್ಮಿಕವಾಗಿ ನುಡಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಏರ್ಪಡಿಸಿದ್ದ ವಾರದ ಅತಿಥಿಯೊಂದಿಗೆ ಸಂವಾದದಲ್ಲಿ ಮಾತನಾಡಿದ ಅವರು, ಮರಾಠಿ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಸಾಹಿತಿಗಳು ಮಾತ್ರ ಇರುತ್ತಾರೆ. ಅಲ್ಲಿನ ಮುಖ್ಯಮಂತ್ರಿ ಕೂಡ ಸಭಿಕರ ಸಾಲಿನಲ್ಲಿ ಕುಳಿತಿರುತ್ತಾರೆ. ಅದೇ ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗಳಲ್ಲಿ ಸಾಹಿತಿಗಳಿಗಿಂತ ರಾಜಕಾರಣಿಗಳೇ ವಿಜೃಂಭಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನಕ್ಕೆ ವಿದೇಶದಲ್ಲಿರುವ 500 ಅನಿವಾಸಿ ಭಾರತೀಯರನ್ನು ಆಹ್ವಾನಿಸುತ್ತೇವೆ ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದ್ದಾರೆ. ಆದರೆ, ನಮ್ಮಲ್ಲಿರುವ ಪ್ರಮುಖ ಸಾಹಿತಿಗಳಿಗೇ ಆಹ್ವಾನವಿರುವುದಿಲ್ಲ. ದೇವನೂರು ಮಹಾದೇವ, ಎಸ್.ಎಲ್.ಭೈರಪ್ಪ, ಹಂ.ಪ.ನಾಗರಾಜಯ್ಯ ಸೇರಿದಂತೆ ಹಲವರ ಸಲಹೆ ಪಡೆದು ಸಮ್ಮೇಳನದ ಸ್ವರೂಪ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳಲಿ. ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯವಾಗಿ ಅನುಷ್ಠಾನಗೊಳ್ಳುವವರೆಗೆ ಸಮ್ಮೇಳನಾಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದಿಲ್ಲ ಎಂಬ ದೇವನೂರು ಅವರ ನಿಲುವನ್ನು ನಾವು ಗೌರವಿಸಬೇಕಲ್ಲವೇ?. ಅದನ್ನು ಅನುಷ್ಠಾನಕ್ಕೆ ತರಬೇಕಲ್ಲವೇ ಎಂದರು.

ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಹೆಸರಾಂತ 100 ಲೇಖಕರನ್ನು ವಿಶೇಷ ಅತಿಥಿಗಳಾಗಿ ಆಹ್ವಾನಿಸಿ, ಅವರನ್ನು ಗೌರವದಿಂದ ಕಾಣಬೇಕು. ಲೇಖಕರೇ ಪಾಲ್ಗೊಳ್ಳುವುದಿಲ್ಲ ಅಂದರೆ ಸಮ್ಮೇಳನದ ಔಚಿತ್ಯವೇನು?. ಹೀಗಾಗಿ ಸಾಹಿತ್ಯ ಸಮ್ಮೇಳನದ ಸ್ವರೂಪ ಬದಲಾಗಬೇಕಿದೆ. ರಾಜಕೀಯ ಮತ್ತು ಧರ್ಮ ಈ ಎರಡೂ ಎಲ್ಲದರ ಮೇಲೂ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುತ್ತವೆ. ಇದಕ್ಕೆ ಸಾಹಿತ್ಯ ಸಮ್ಮೇಳನ ಬಲಿಯಾಗಬಾರದು. ಧ್ವನಿ ಎತ್ತಿದರೆ ಉರುಳಿಸುತ್ತೇವೆ ಎಂಬ ಭಯದ ವಾತಾವರಣವಿದೆ. ಸಮಾಜದಲ್ಲೂ ಪ್ರತಿಭಟನೆಯ ಶಕ್ತಿ ಕಡಿಮೆಯಾಗಿದೆ. ಕೆಲವು ಸಾಹಿತಿಗಳು ಸ್ವಾಯತ್ತ ಪ್ರಜ್ಞೆ ಕಳೆದುಕೊಂಡಿರುವುದು ಕೂಡ ಸಮಸ್ಯೆಗೆ ಕಾರಣವಾಗಿದೆ. ಸಾಹಿತಿಗಳು ಪ್ರಶಸ್ತಿಯ ಹಂಗಿಗೆ ಬೀಳಬಾರದು ಮತ್ತು ಸ್ಥಾನಮಾನಕ್ಕಾಗಿ ವಿಧಾನಸೌಧ ಸುತ್ತಬಾರದು ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ನೆರವು ಇಲ್ಲದೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಮಾಜ ಮನಸ್ಸು ಮಾಡಬೇಕು. ಆಳ್ವಾಸ್ ಸಂಸ್ಥೆ ನಡೆಸುವ ನುಡಿಸಿರಿ ಮತ್ತು ಧಾರವಾಡದಲ್ಲಿ ನಡೆಯುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮಗಳು ಇದಕ್ಕೆ ಮಾದರಿಯಾಗಿವೆ. ಹೀಗಾಗಿ ಜಾಗೃತ ಚಳವಳಿ ನಡೆಯಬೇಕಿದೆ. ಅದಕ್ಕೆ ಸಮೂಹ ಮಾಧ್ಯಮಗಳ ಪಾತ್ರ ದೊಡ್ಡದು. ವ್ಯಕ್ತಿ ಪ್ರತಿಷ್ಠೆ ಇದ್ದ ಕಡೆ ಉದ್ದೇಶದ ದಿಕ್ಕು ಬದಲಾಗುತ್ತದೆ. ವಿಷಯವೇ ನಗಣ್ಯವಾಗುತ್ತದೆ. ವ್ಯಕ್ತಿಗಿಂತ ಕನ್ನಡ ಸಾಹಿತ್ಯ ಪರಿಷತ್ ದೊಡ್ಡದು. 7 ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಪರಿಷತ್‌ನ ನೇತೃತ್ವವನ್ನು ಸಾಹಿತಿಗಳಲ್ಲದವರು ವಹಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಪರಿಷತ್ ಅಧಿಕಾರದ ಕೇಂದ್ರವಾಗಿದೆ. ಸಾಹಿತ್ಯ ಕೂಡ ಧರ್ಮ ಮತ್ತು ರಾಜಕೀಯದ ಅಧೀನಕ್ಕೆ ಒಳಪಡುತ್ತಿದೆ ಎಂಬ ಆತಂಕ ಕಾಡುತ್ತಿದೆ ಎಂದರು.

ಮಂಡ್ಯ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ. ಮೂಡಲಪಾಯ ಯಕ್ಷಗಾನ ಈ ಮಣ್ಣಿನ ಕಲೆ. ಹೀಗಾಗಿ ಯಕ್ಷಗಾನವು ಮಂಡ್ಯದ ಕೊಡುಗೆ ಎಂಬುದನ್ನು ಸಮ್ಮೇಳನದಲ್ಲಿ ಸಾಬೀತು ಮಾಡಿ ತೋರಬೇಕಿದೆ. ಕುವೆಂಪು ಅವರಿಗೆ ನೇಗಿಲ ಯೋಗಿ ಮತ್ತು ವಿಚಾರಕ್ರಾಂತಿ ಪರಿಕಲ್ಪನೆಗಳು ಮೂಡಿದ್ದು ಮಂಡ್ಯ ಜಿಲ್ಲೆಯಿಂದ. ಇಲ್ಲಿನ ಕೃಷಿ ಸಂಪತ್ತು ಮತ್ತು ಸಾಹಿತ್ಯ ಸಂಪತ್ತು ಶ್ರೇಷ್ಠವಾಗಿದೆ. ಬಿಎಂಶ್ರೀ, ತ್ರಿವೇಣಿ, ಪುತಿನ, ಕೆಎಸ್‌ನ, ತ್ರಿವೇಣಿ ಮಂಡ್ಯದವರು. ಮಂಡ್ಯ ಎಂದರೆ ಕಾವೇರಿ ಚಳವಳಿ, ಕಬ್ಬು, ಒರಟು ಜನ, ಜಗಳಗಂಟರು ಎಂದು ತಪ್ಪಾಗಿ ಬಿಂಬಿತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸಂಪತ್ತಿನ ಬಗ್ಗೆ ಗೋಷ್ಠಿಗಳಲ್ಲಿ ಚರ್ಚೆಯಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಉಪಾಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್, ಕಾರ್ಯದರ್ಶಿ ಜಯರಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net